ಹೊನ್ನಾಳಿ ಬಳಿ ಬೈಕ್ ಪ್ರಕರಣದಲ್ಲಿ ಸೆರೆ ಸಿಕ್ಕ ರಿಯಾಜುದ್ದೀನ್ ಲಷ್ಕರ್-ಇ-ತೊಯ್ಬಾದ ಸಹಚರರೊಂದಿಗೆ ಹೈದ್ರಾಬಾದ್ ಸ್ಫೋಟದಲ್ಲಿ ಭಾಗಿಯಾಗಿರುವ ಬಗ್ಗೆ ವಿಚಾರಣೆ ವೇಳೆ ಸಂಗ್ರಹಿಸಲಾದ ಮಾಹಿತಿಯಲ್ಲಿ ತಿಳಿದು ಬಂದಿದ್ದು, ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ.
ಶಂಕಿತ ಉಗ್ರರಾದ ಮಹಮದ್ ಗೌಸ್ ಅಲಿಯಾಸ್ ರಿಯಾಜುದ್ದೀನ್ ನಾಸಿರ್ ಮತ್ತು ಆತನ ಸಹಚರ ಅಸಾಮುಲ್ಲಾ ಇಸ್ಮಾಯಿಲ್ ಅಬೂಬಕರ್‌ನನ್ನು ಬೈಕ್ ಕಳವು ಆರೋಪದ ಮೇಲೆ ದಾವಣಗೆರೆ ಪೊಲೀಸರು ಬಂಧಿಸಿದ್ದರು. ಹೈದರಾಬಾದ್ ಎಸ್ಪಿಎಫ್ ಕಚೇರಿಯ ಸ್ಪೋಟ ಪ್ರಕರಣದ ರೂವಾರಿಯಾಗಿದ್ದ ಲಷ್ಕರ್-ಇ-ತೊಯ್ಬಾದ ಶಾಹೀದ್ ಜೊತೆ ಸಂಪರ್ಕದಲ್ಲಿದ್ದೆ ಹಾಗೂ ಹೈದರಾಬಾದ್ ಮೆಕ್ಕಾ ಮಸೀದಿ ಬಳಿ ನಡೆದ ಬಾಂಬ್ ಸ್ಪೋಟದಲ್ಲಿ ಪ್ರಮುಖ ಆರೋಪಿಯಾಗಿದ್ದೆ ಎಂಬುದನ್ನು ವಿಚಾರಣೆ ವೇಳೆ ರಿಯಾಜ್ ಒಪ್ಪಿಕೊಂಡಿದ್ದಾನೆ.
ಈ ನಡುವೆ, ಬಂಧಿಸಲಾಗಿರುವ ಉಗ್ರರು ಗೊಂದಲಮಯವಾದ ಹೇಳಿಕೆಗಳನ್ನು ನೀಡುತ್ತಿರುವ ಕಾರಣ ಇಬ್ಬರು ಉಗ್ರರನ್ನು ಮಂಪರು ಪರೀಕ್ಷೆಗೆ ಒಳಪಡಿಸುವ ನಿರ್ಧಾರವನ್ನು ನಗರ ಪೊಲೀಸರು ಕೈಗೊಂಡಿದ್ದಾರೆ. ಇದರಿಂದ ಮಹತ್ವದ ಮಾಹಿತಿಗಳು ಸಿಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. ಉಗ್ರರಿಂದ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ಗುಜರಾತ್ ಪೊಲೀಸ್ ಅಧಿಕಾರಿಗಳು ದಾವಣಗೆರೆಗೆ ಬುಧವಾರ ಆಗಮಿಸಲಿದ್ದಾರೆ.
ರಿಯಾಜ್ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಸೇರಿದಂತೆ ರಾಜ್ಯದ ನಾನಾ ಕಡೆಗಳಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಎಂಬ ಮಹತ್ವದ ಅಂಶ ಬೆಳಕಿಗೆ ಬಂದಿದ್ದು, ಪೊಲೀಸರು ತೀವ್ರ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.
ರಾಜ್ಯದಲ್ಲಿ ಸ್ಪೋಟ ನಡೆಸಲು ಪೂರ್ವತಯಾರಿ ನಡೆಸಿ, ನಕ್ಷೆಗಳನ್ನು ಹಾಕಿಕೊಂಡಿದ್ದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುವ ನಿಟ್ಟಿನಲ್ಲಿ ಪೊಲೀಸ್ ತಂಡ ಮಂಗಳೂರಿಗೆ ದಿಢೀರ್ ಭೇಟಿ ನೀಡಿದ್ದು, ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.
|