ಪೇಜಾವರ ಶ್ರೀಗಳು ರಾಜಕಾರಣ ಪ್ರವೇಶಿಸಲಿ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿಕೆ ನೀಡಿಲ್ಲ. ಇದು ಮಾಧ್ಯಮದವರ ಸೃಷ್ಟಿ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಜೆಡಿಎಸ್ ವಕ್ತಾರ ವೈ.ಎಸ್.ವಿ. ದತ್ತಾ ತಿಳಿಸುವ ಮೂಲಕ ದೇವೇಗೌಡರ ಹೇಳಿಕೆ ಹೊಸ ತಿರುವನ್ನು ಪಡೆದುಕೊಂಡಿದೆ.
ಅರಸೀಕೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ದತ್ತಾ, ಪೇಜಾವರ ಶ್ರೀಗಳು ಹಿಂದೂ ಪರ ಹೇಳಿಕೆ ನೀಡುತ್ತಾರೆ ಎಂದು ದೇವೇಗೌಡರು ಹೇಳಿದ್ದನ್ನೇ ತಪ್ಪಾಗಿ ಗ್ರಹಿಸಿದ ಮಾಧ್ಯಮಗಳು ವಿವಾದಗಳಿಗೆ ಎಡೆ ಮಾಡಿಕೊಟ್ಟಿವೆ ಎಂದು ತಿಳಿಸಿದರು.
ಜೆಡಿಎಸ್ ತೊರೆದಿರುವ ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ್‌ರವರ ಮೇಲೆ ಈ ಸಂದರ್ಭದಲ್ಲಿ ಹರಿಹಾಯ್ದ ದತ್ತಾ, ಪ್ರಕಾಶ್‌ರವರಿಗೆ ರಾಜಕೀಯದ ಗಂಧ ಗಾಳಿ ತಿಳಿದಿರಲಿಲ್ಲ. ಅವರನ್ನು ದೇವೇಗೌಡ ರಾಜಕಾರಣಕ್ಕೆ ಎಳೆತಂದು ರಾಜಕೀಯವನ್ನು ಬೋಧಿಸಿ ಬೆಳೆಸಿದ್ದಾರೆ. ಈಗ ಅವರೇ ಜೆಡಿಎಸ್ ವಿರುದ್ದ ಮಾತನಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಜೆಡಿಎಸ್ ತೊರೆದಿರುವ ಸಿಂಧ್ಯಾ, ಸಿದ್ಧರಾಮಯ್ಯ, ಜಿ.ಟಿ.ದೇವೇಗೌಡ, ಎಂ.ಪಿ.ಪ್ರಕಾಶ್ ಇವರೇ ಮೊದಲಾದ ನಾಯಕರನ್ನು ದೇವೇಗೌಡರು ತಿದ್ದಿ ತೀಡಿ ಬೆಳೆಸಿದ್ದಾರೆ. ಜೆಡಿಎಸ್ ಎಂಬುದು ಒಂದು ಕಾರ್ಖಾನೆಯಿದ್ದಂತೆ. ಈ ಮೇಲೆ ಹೆಸರಿಸಿದ ಕಚ್ಚಾವಸ್ತುಗಳ ರೂಪದಲ್ಲಿದ್ದವರನ್ನೆಲ್ಲಾ ತಂದು ನಾಯಕರನ್ನಾಗಿಸಿ, ದೇವೇಗೌಡರು ಸಿದ್ಧವಸ್ತುವಿನ ರೂಪ ಕೊಟ್ಟರು. ಇಂದು ಅವರೆಲ್ಲಾ ನಾಯಕರೆನಿಸಿಕೊಳ್ಳಲು ದೇವೇಗೌಡರೇ ಕಾರಣ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
|