ನಗರದ ವಿವಿಧ ಕಡೆಗಳಲ್ಲಿ ನಡೆದ ಪ್ರತ್ಯೇಕ ಅಪಘಾತಗಳಲ್ಲಿ ಇಂದು (ಬುಧವಾರ)ಮೂರು ಮಂದಿ ಮೃತಪಟ್ಟಿದ್ದಾರೆ.ಕೆ.ಆರ್.ಪುರಂನ ಪಟಾಲಂ ಲೇಓಟ್ ನಿವಾಸಿಯಾದ ಗಾಯತ್ರಿ(35) ಎಂಬುವವರು ಕಾಡುಗೋಡಿ ರೈಲ್ವೆ ಗೇಟ್ ಸಮೀಪ ಮೋಟಾರು ಬೈಕಿನಲ್ಲಿ ಹೋಗುತ್ತಿದ್ದಾಗ ಕಂಟೈನರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಕೆ.ಆರ್. ಪುರಂ ಸಂಚಾರಿ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.
ಇನ್ನೊಂದು ಅಪಘಾತದಲ್ಲಿ ಮೋಟಾರ್ ಬೈಕಿಗೆ ಲಾರಿಯೊಂದು ಡಿಕ್ಕಿ ಹೊಡೆದು ಸಹಕಾರನಗರದ ನಿವಾಸಿಯಾಗಿದ್ದ ಕೇಬಲ್ ಅಪರೇಟರ್ ಟಿ.ಆರ್. ಪ್ರಕಾಶ್ (30) ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಈ ದುರ್ಘಟನೆ ರಾಮಮೂರ್ತಿನಗರದ ಎ.ಎಸ್.ಆರ್. ಕಲ್ಯಾಣ ಮಂಟಪ ರಿಂಗ್ ರಸ್ತೆಯಲ್ಲಿ ಬೆಳಿಗ್ಗೆ ಸಂಭವಿಸಿದೆ. ಪ್ರಕರಣವನ್ನು ನಗರ ಸಂಚಾರ ಠಾಣೆಯಲ್ಲಿ ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಸೈಕಲ್ ಸವಾರನ ಸಾವು: ಫ್ರೇಜರ್ ಟೌನ್ ಕೆಳಸೇತುವೆ ಸಮೀಪ ನಡೆದ ದುರಂತದಲ್ಲಿ ಸೈಕಲ್ಗೆ ಮಿಲಿಟರಿ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಸೈಕಲ್ ಸವಾರ ಪೆನ್ಸಿಲ್ ರಾವ್(25) ಎನ್ನುವವರು ಮೃತಪಟ್ಟಿದ್ದಾರೆ. ಆಂಧ್ರ ಪ್ರದೇಶ ನಿವಾಸಿಯಾದ ರಾವ್ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಪ್ರಕರಣವನ್ನು ಫ್ರೇಜರ್ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
|