ಲೋಕಯುಕ್ತ ಇಲಾಖೆ ರಾಜ್ಯದಲ್ಲಿ ಇಂದು (ಗುರುವಾರ) ಏಕಾಏಕಿ ನಡೆಸಿದ ದಾಳಿಯಲ್ಲಿ ರಾಜ್ಯದ ಪೊಲೀಸ್, ಸಾರಿಗೆ, ವಾಣಿಜ್ಯ ಹೀಗೆ ಹತ್ತು ಹಲವು ಇಲಾಖೆಗಳ ಅಧಿಕಾರಿಗಳಿಂದ ಅಪಾರ ಪ್ರಮಾಣದ ಆಸ್ತಿ ಹಾಗೂ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ದಾವಣಗೆರೆಯ ಪೊಲೀಸ್ ಅಧಿಕಾರಿ ರೇವಣ್ಣ ಅವರ ಕಚೇರಿ ಹಾಗೂ ಮನೆಗಳ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಆಕ್ರಮವಾಗಿ ಹೊಂದಿದ್ದ ಕೋಟ್ಯಂತರ ರೂ. ಮೌಲ್ಯದ ಆಸ್ತಿ, ಸಂಪತ್ತನ್ನು ವಶಪಡಿಸಿಕೊಂಡಿದ್ದಾರೆ. ಹಾಗೆಯೇ ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಬಾಬುರಾವ್ ಮುಡಬಿ ಅವರ ಬೆಂಗಳೂರು ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆಸಲಾಯಿತು.
ಅಲ್ಲದೆ, ಗುಲ್ಬರ್ಗಾ ನಾಗರಿಕ ಹಕ್ಕು ನಿರ್ದೇಶನಾಲಯದ ಎಸ್.ಪಿ. ಪಿತಾಂಬರ ಹೆರಾಜೆಯವರ ಬೆಳ್ತಂಗಡಿ ನಿವಾಸ ಹಾಗೂ ಬಳ್ಳಾರಿಯ ಹೆಚ್ಚುವರಿ ಜಿಲ್ಲಾ ಎಸ್.ಪಿ. ರಾಜಪ್ಪ ಇವರುಗಳ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಂಗಳೂರು ನಗರದಲ್ಲಿರುವ ಕೈಗಾರಿಕಾ ತಾಂತ್ರಿಕ ಇಲಾಖೆ ನಿರ್ದೇಶಕ ಕೊಲ್ಹಾರವರ ಮನೆ ಮೇಲೆ ದಾಳಿ ನಡೆಸಿದ್ದೇ ಅಲ್ಲದೇ ಧಾರವಾಡದ ಕೈಗಾರಿಕಾ ಪ್ರದೇಶದಲ್ಲೂ ಲೋಕಾಯುಕ್ತ ದಾಳಿ ನಡೆಸಲಾಗಿದ್ದು 2 ವೇಬ್ರಿಡ್ಜ್, 1 ಪೆಟ್ರೋಲ್ ಬಂಕ್ ಹಾಗೂ ತಡಕೋಡದಲ್ಲಿ 12 ಎಕರೆ ಜಮೀನು ಹೊಂದಿರುವುದು ಪತ್ತೆಯಾಗಿದೆ.
ಪಣಂಬೂರಿನಲ್ಲಿ ಡಿವೈಎಸ್ಪಿಯಾಗಿ ನಂತರ ಗುಲ್ಬರ್ಗಾ ನಾಗರಿಕ ಹಕ್ಕು ನಿರ್ದೇಶನಾಲಯದಲ್ಲಿ ಎಸ್ಪಿಯಾಗಿ ಸೇವೆ ಸಲ್ಲಿಸುತ್ತಿರುವ ಪಿತಾಂಬರ ಇಂದು ನಿವೃತ್ತಿ ಹೊಂದಲಿದ್ದು, ಅದಕ್ಕಿಂತ ಮೊದಲೇ ದಾಳಿ ಮಾಡಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಬೆಂಗಳೂರು, ಗುಲ್ಬರ್ಗಾ, ಪುತ್ತೂರು, ಬೆಳ್ತಂಗಡಿ, ಬಳ್ಳಾರಿ ಹಾಗೂ ದಾವಣಗೆರೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಯಾವುದೇ ಸುಳಿವು ನೀಡದೆ ಲೋಕಾಯುಕ್ತ ಮಾಡಿರುವ ದಾಳಿಯಲ್ಲಿ ಕೆಲವು ಮಹತ್ವದ ದಾಖಲೆಗಳು ಪತ್ತೆಯಾಗಿದ್ದು, ಈ ಬಗ್ಗೆ ತನಿಖೆ ಮುಂದುವರೆಸಲು ಲೋಕಾಯುಕ್ತ ನಿರ್ಧರಿಸಿದೆ.
|