ಚಿತ್ರದುರ್ಗದಲ್ಲಿ ಫೆ.14ರಂದು ನಡೆಯಲಿರುವ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಸಂದರ್ಭ ವಿವಿಧ ರಾಜಕೀಯ ಪಕ್ಷಗಳಿಂದ ಜನನಾಯಕರು ಬಿಜೆಪಿ ಸೇರಲಿದ್ದಾರೆ.
ಚುನಾವಣೆಗೆ ಸಜ್ಜಾಗುತ್ತಿರುವ ರಾಜ್ಯದಲ್ಲಿ ಆಯಾರಾಂ-ಗಯಾರಾಂ ಸಂಸ್ಕೃತಿಯೂ ಭರದಿಂದಲೇ ಸಾಗುತ್ತಿದ್ದು, ಇತ್ತೀಚೆಗಷ್ಟೇ ಸಿದ್ಧರಾಮಯ್ಯ ಬೆಂಬಲಿಗರು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದರು. ಜಿ.ಟಿ.ದೇವೇಗೌಡರು ಬಿಜೆಪಿ ಸೇರಿದ್ದರು. ಎಂ.ಪಿ.ಪ್ರಕಾಶ್ ಅವರದು ಉತ್ತರಾಯಣ ಬಂದರೂ ಯಾಕೋ ಸುದ್ದಿಯಿಲ್ಲ. ಈಗ ಚಿತ್ರದುರ್ಗ ಜಿಲ್ಲೆಯ ರಾಜಕೀಯ ಧುರೀಣರ ಸರಣಿ.
14ರಂದು ನಡೆಯುವ ಬೃಹತ್ ಸಮಾವೇಶಕ್ಕೆ ನಡೆಯಲಿದ್ದು, ಮಾಜಿ ಉಪಪ್ರಧಾನಿ ಎಲ್.ಕೆ.ಆಡ್ವಾಣಿ ಅದಕ್ಕೆ ಚಾಲನೆ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಪಕ್ಷಗಳಿಗೆ ಸೇರಿದ ಮುಖಂಡರು ಪಕ್ಷವನ್ನು ಸೇರಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಜೆಡಿಎಸ್ ನಾಯಕರ ವರ್ತನೆಯಿಂದ ಅಸಮಾಧಾನಗೊಂಡಿದ್ದ ಮಾಜಿ ಸಚಿವ ತಿಪ್ಪೇಸ್ವಾಮಿಯವರೂ ಸೇರಿದಂತೆ ಮಾಜಿ ಶಾಸಕ ಚಂದ್ರಪ್ಪ, ಎಚ್.ಟಿ.ನಾಗಿರೆಡ್ಡಿ, ಜಿ.ಎಸ್.ಮಂಜುನಾಥ್, ಎನ್.ಆರ್.ಲಕ್ಷ್ಮೀಕಾಂತ್ ಇವರೇ ಮೊದಲಾದ ನಾಯಕರು ತಮ್ಮ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರಲಿದ್ದಾರೆ ಎಂದು ತಿಳಿದುಬಂದಿದೆ.
ಇದುವರೆಗೂ ಚಿತ್ರದುರ್ಗ ಜಿಲ್ಲೆಯಲ್ಲಿ ಜೆಡಿಎಸ್ ವರ್ಚಸ್ಸು ಹೆಚ್ಚಾಗಿತ್ತು. ತಿಪ್ಪೇಸ್ವಾಮಿಯಂಥ ಮುಖಂಡರು ಪಕ್ಷದಿಂದ ಹೊರ ನಡೆದು ಬಿಜೆಪಿ ಸೇರಲಿರುವುದು ಜೆಡಿಎಸ್‌ಗೆ ದೊಡ್ಡ ಪ್ರಮಾಣದ ಆಘಾತ ನೀಡಲಿದೆ ಎಂದು ತಿಳಿದುಬಂದಿದೆ.
|