ಶಂಕಿತ ಉಗ್ರರಾದ ಮಹಮದ್ ಗೌಸ್ ಮತ್ತು ಆತನ ಸಹಚರರಾದ ಅಸಾದುಲ್ಲಾ ಹಾಗೂ ಆಸಿಫ್ ಈ ಹಿಂದೆ ಕರಾವಳಿಗೆ ಭೇಟಿ ನೀಡಿದ್ದರೆಂಬ ಮಾಹಿತಿ ವಿಚಾರಣೆ ವೇಳೆ ಬಹಿರಂಗಗೊಂಡಿದೆ. ಈ ಮೂಲಕ ದಕ್ಷಿಣ ಕನ್ನಡದಲ್ಲೂ ಭಯೋತ್ಪಾದಕರ ಕರಿನೆರಳು ಕಂಡು ಬಂದಿದೆ.
ಮಂಗಳೂರಿನ ಉಳ್ಳಾಲದಲ್ಲಿ ಉಗ್ರರು ಕೆಲವು ದಿನಗಳು ತಂಗಿದ್ದು, ಅಲ್ಲಿನ ಸ್ಥಳಗಳನ್ನು ಪರೀಶೀಲಿಸುತ್ತಿದ್ದರು. ಇಲ್ಲಿಯೂ ವಿಧ್ವಂಸಕ ಕೃತ್ಯ ನಡೆಸುವ ಹುನ್ನಾರ ಮಾಡಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ ಎಂದು ಮಂಗಳೂರಿನ ಐಜಿಪಿ ತಿಳಿಸಿದ್ದಾರೆ.
ಈ ನಡುವೆ, ಆಸಿಫ್ ವಿಚಾರಣೆಯನ್ನು ತೀವ್ರ ಗೊಳಿಸಿರುವ ಪೊಲೀಸರು ಆತ ರಿವಾಲ್ವರ್ ತರಬೇತಿ ಪಡೆಯುತ್ತಿದ್ದ ಜಾಗವನ್ನು ಪರೀಶೀಲಿಸಿದ್ದಾರೆ. ಈತ ಉತ್ತರ ಪ್ರದೇಶದ ಪೊಲೀಸರಿಗೆ ಬೇಕಾಗಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಈ ಸಂಬಂಧ ಉತ್ತರ ಪ್ರದೇಶದ ಪೊಲೀಸರು ನಗರಕ್ಕೆ ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಹೆಚ್ಚಿನ ವಿಚಾರಣೆಯನ್ನು ನಡೆಸುವ ನಿಟ್ಟಿನಲ್ಲಿ ಈ ಉಗ್ರಗಾಮಿಗಳನ್ನು ಬೆಂಗಳೂರಿಗೆ ಕರೆತರಲಿದ್ದು, ಈ ಮೂಲಕ ಹೆಚ್ಚಿನ ಮಾಹಿತಿಗಳು ಬಹಿರಂಗಗೊಳ್ಳುವ ಸಾಧ್ಯತೆಗಳಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
|