ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಿತವಾಗಿರುವ ಕನಸಿನ ರೈಲು 'ಸುವರ್ಣ ರಥ'ಕ್ಕೆ ನಾಳೆ (ಶನಿವಾರ) ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.
ರೈಲು ಮಂಡಳಿಯ ಸಹಭಾಗಿತ್ವದಲ್ಲಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಸಿದ್ದಪಡಿಸಿರುವ ಸುವರ್ಣ ರಥವು ಯಶವಂತಪುರದಿಂದ ಈ ತಿಂಗಳ 11ರಂದು ಪ್ರಾಯೋಗಿಕವಾಗಿ ಸಂಚಾರ ಪ್ರಾರಂಭಿಸಲಿದೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ರೈಲು ರಾಜ್ಯದ ನಾನಾ ಧಾರ್ಮಿಕ, ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪ್ರದೇಶಗಳಿಗೆ ಸಂಚರಿಸಲಿದ್ದು, ದಿನವೊಂದಕ್ಕೆ 350 ಡಾಲರ್ ಶುಲ್ಕ ನಿಗದಿ ಪಡಿಸಿದ್ದು, ಪ್ರವಾಸದಲ್ಲಿ ಏಳು ದಿನ ಮತ್ತು ಏಳು ಹಂತಗಳಲ್ಲಿ ಸುಮಾರು 500 ಮೈಲಿ ದೂರವನ್ನು ಕ್ರಮಿಸಲಿದೆ ಎಂದು ತಿಳಿದು ಬಂದಿದೆ.
ಕರ್ನಾಟಕದ ಗತ ವೈಭವ ಹಾಗೂ ಸಂಸ್ಕೃತಿಗಳನ್ನು ಬಿಂಬಿಸುವ ಹಾಗೂ ಜನರಿಗೆ ಈ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಬೇಲೂರು-ಹಳೆಬೀಡಿನ ವಿನ್ಯಾಸದಲ್ಲಿ ನಿರ್ಮಿಸಲಾಗಿರುವ ಸುವರ್ಣ ರಥ, ಶ್ರೀರಂಗ ಪಟ್ಟಣ, ಹಂಪಿ, ಬೆಳಗೊಳ, ಪಟ್ಟದಕಲ್ಲು, ಬಾದಾಮಿ ಸೇರಿದಂತೆ ರಾಜ್ಯದ ನಾನಾ ಐತಿಹಾಸಿಕ ಸ್ಥಳಗಳಿಗೆ ಸಂಚರಿಸಲಿದೆ ಎಂದು ತಿಳಿದು ಬಂದಿದೆ.
|