ಶಂಕಿತ ಬಂಧಿತ ಉಗ್ರಗಾಮಿ ರಿಯಾಜುದ್ದೀನ್ ಬಳಿ ಇತ್ತೆನ್ನಲಾದ ನಕಾಶೆಯಲ್ಲಿ ಹಾಕಿಕೊಂಡಿದ್ದ ಗುರುತಿನ ಅನುಸಾರ ಉಡುಪಿಯ ಶ್ರೀಕೃಷ್ಣ ದೇವಾಲಯದ ಮೇಲೆ ದಾಳಿ ನಡೆಸಲು ಆತ ಯೋಜಿಸಿದ್ದ ಎಂಬ ಆಘಾತಕಾರಿ ಅಂಶ ಹೊರಬಂದ ಮೇಲೆ ಕರಾವಳಿ ಪ್ರದೇಶಗಳ ವ್ಯಾಪ್ತಿಯಲ್ಲಿ ಬರುವ ಪೊಲೀಸರು ಈಗ ಕಟ್ಟೆಚ್ಚರ ವಹಿಸಿದ್ದಾರೆ.
ಬೈಕ್ ಕಳವಿನ ಆರೋಪದಲ್ಲಿ ಸಿಕ್ಕಿಬಿದ್ದ ಭಯೋತ್ಪಾದಕರು ಬಹಿರಂಗಪಡಿಸುತ್ತಿರುವ ಅಂಶಗಳು ರಾಜ್ಯದ ಪೊಲೀಸ್ ಇಲಾಖೆಗೆ ಸವಾಲು ಒಡ್ಡಿದಂತಾಗಿದ್ದು, ಭದ್ರತೆಗಾಗಿ ಗೃಹ ಇಲಾಖೆ ಕಟ್ಟೆಚ್ಚರದಿಂದಿರಬೇಕಾದ ಅನಿವಾರ್ಯತೆ ಬಂದಿದೆ.
ಉಗ್ರರ ಸಂಭವನೀಯ ದಾಳಿಯ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶದ ಪುಣ್ಯ ಕ್ಷೇತ್ರಗಳಾದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕಟೀಲು ಮೊದಲಾದ ಪ್ರದೇಶಗಳೆಡೆ ಈಗ ಹೆಚ್ಚಿನ ಸುರಕ್ಷತಾ ಕ್ರಮವನ್ನು ಕೈಗೊಳ್ಳಲು ಯೋಜಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಶಂಕಿತ ಉಗ್ರರು ಉಳ್ಳಾಲ, ಭಟ್ಕಳ, ಮಂಗಳೂರು, ಉಡುಪಿ, ಆಗುಂಬೆ ಮೊದಲಾದ ಪ್ರದೇಶಗಳಲ್ಲಿ ಬೈಕ್ ಮೇಲೆ ಸಂಚರಿಸಿದ್ದರು ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶದಲ್ಲಿ ಉಗ್ರರ ಜಾಡಿಗಾಗಿ ತೀವ್ರ ಶೋಧ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೆ ಪುಷ್ಟಿ ನೀಡುವಂತೆ ರಾಜ್ಯ ಪೊಲೀಸ್ ಜಂಟಿ ಆಯುಕ್ತ ಗೋಪಾಲ್ ಬಿ.ಹೊಸೂರುರವರು ದಾವಣಗೆರೆಯಲ್ಲೇ ಮೊಕ್ಕಾಂ ಹೂಡಿದ್ದು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.
|