ದೇಶೀಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡಬೇಕಾಗಿದೆ ಎಂದು ರಾಷ್ಟ್ರಪತಿ ಪ್ರತಿಭಾ ದೇವಿಸಿಂಗ್ ಪಾಟೀಲ್ ಅವರು ಹೇಳಿದರು.
ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಐಷಾರಾಮಿ 'ಸುವರ್ಣ ರಥ'ಕ್ಕೆ ಶನಿವಾರ ಯಶವಂತಪುರ ರೈಲು ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿದ ಬಳಿಕ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದ ರಾಷ್ಟ್ರಪತಿ, ಪ್ರತಿವರ್ಷ 380 ದಶಲಕ್ಷ ಮಂದಿ ಭಾರತೀಯರು ದೇಶ ಸುತ್ತಿ, ವಿಭಿನ್ನ ಪ್ರದೇಶಗಳ ಜನತೆಯ ಬಗ್ಗೆ ಹೆಚ್ಚಿನ ತಿಳಿವಳಿಕೆ ಪಡೆದು ಮರಳುತ್ತಾರೆ. ಅವರಿಗೆ ದೇಶದ ಸಾಂಸ್ಕೃತಿಕ ವೈವಿಧ್ಯದ ಉತ್ತಮ ಅರಿವು ಇರುತ್ತದೆ ಎಂದು ಹೇಳಿದರಲ್ಲದೆ, ದೇಶೀಯ ಪ್ರವಾಸೋದ್ಯಮ ಉತ್ತೇಜಿಸಬೇಕು ಎಂದು ಕರೆ ನೀಡಿದರು.
ಸಮಾರಂಭದಲ್ಲಿ ಹಾಜರಿದ್ದ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು, ಈ ಸುವರ್ಣ ರಥವು ದಕ್ಷಿಣ ಭಾರತದಲ್ಲೇ ಮೊದಲನೆಯ ಪ್ರಯತ್ನವಾಗಿದೆ ಎಂದು ತಿಳಿಸಿದರಲ್ಲದೆ, 18 ಬೋಗಿಗಳ ಈ ಲಕ್ಸುರಿ ರೈಲು ದಕ್ಷಿಣದ, ವಿಶೇಷವಾಗಿ ಕರ್ನಾಟಕದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡಲಿದೆ ಎಂದು ಹೇಳಿದರು.
ಈ ಸುವರ್ಣ ರಥ ಎಂಬ ಐಷಾರಾಮಿ ರೈಲು ಕರ್ನಾಟಕದ ಇತಿಹಾಸ, ಸಂಸ್ಕೃತಿ ಮತ್ತು ಪ್ರಕೃತಿ ಸೌಂದರ್ಯದ ಸಮೃದ್ಧತೆಯನ್ನು ಪ್ರಚುರಪಡಿಸಲಿದ್ದು, ರಾಜ್ಯದ ಜನತೆಯ ಆತ್ಮೀಯ ಆತಿಥ್ಯವನ್ನೂ ಒಳಗೊಳ್ಳಲಿದೆ ಎಂದು ಅವರು ನುಡಿದರು.
ರೈಲ್ವೇ ಖಾತೆ ರಾಜ್ಯ ಸಚಿವ ಆರ್.ವೇಲು, ಕೇಂದ್ರ ಸಾರಿಗೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಹಾಗೂ ಸಂಸದ ಅನಂತ್ ಕುಮಾರ್ ಅವರು ಈ ಸಂದರ್ಭ ಹಾಜರಿದ್ದರು.
|