ದಾವಣಗೆರೆಯ ಹೊನ್ನಾಳಿಯಲ್ಲಿ ಬಂಧಿಸಲಾಗಿರುವ ಸಿಮಿ ಸಂಘಟನೆಯ ಉಗ್ರಗಾಮಿಗಳಾದ ಅಸಾದುಲ್ಲಾ, ಮಹಮದ್ ಗೌಸ್ ಹಾಗೂ ಹುಬ್ಬಳ್ಳಿಯ ಕಿಮ್ಸ್ ವಿದ್ಯಾರ್ಥಿ ಆಸಿಫ್‌ನ ವಿಚಾರಣೆ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಲು ಸೋಮವಾರ ಬೆಂಗಳೂರಿನಲ್ಲಿ ಮಂಪರು ಪರೀಕ್ಷೆ ನಡೆಸಲು ಪೊಲೀಸ್ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಪಾಕಿಸ್ತಾನದ ಮಾಜಿ ಪ್ರಧಾನಿ ಬೇನಜೀರ್ ಭುಟ್ಟೋ ಹತ್ಯೆಯಿಂದಾಗಿ ಸುಮಾರು 50 ಕೆ.ಜಿ.ಯಷ್ಟು ಆರ್‌ಡಿಎಕ್ಸ್ ಪಾಕಿಸ್ತಾನದಿಂದ ಪೂರೈಕೆಯಾಗಿರಲಿಲ್ಲ. ಈ ಆರ್‌ಡಿಕ್ಸ್ ಮೂಲಕ ಜನವರಿ 30ರಂದು ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಸೇರಿದಂತೆ ರಾಜ್ಯಾದ್ಯಂತ ಸ್ಪೋಟ ನಡೆಸುವ ತಯಾರಿ ನಡೆಸಿದ್ದರು ಎಂಬಂತಹ ಸಾಕಷ್ಟು ಆಘಾತಕಾರಿ ಅಂಶಗಳು ಬಹಿರಂಗಗೊಂಡಿದ್ದು, ಮಂಪರು ಪರೀಕ್ಷೆಯಿಂದ ಇನ್ನಷ್ಟು ಮಾಹಿತಿ ಲಭ್ಯವಾಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ಈ ಮಧ್ಯೆ, ಉಗ್ರಗಾಮಿಗಳಿಗೆ ಲಷ್ಕರ್-ಇ-ತೊಯ್ಬಾ, ಸಿಮಿ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕವಿದ್ದು, ಪೊಲೀಸ್ ಮುಖ್ಯಾಲಯ ಸ್ಪೋಟಿಸುವುದು ಪ್ರಮುಖ ಗುರಿಯಾಗಿತ್ತು. ಅಲ್ಲದೆ, ಗೋವಾದ 6 ಕಡೆಗಳಲ್ಲಿ ಸರಣಿ ಸ್ಪೋಟದ ಸಂಚು ರೂಪಿಸಿದ್ದರು ಹಾಗೂ ರಾಜ್ಯದ ಐಟಿ ಉದ್ಯಮದ ಮೇಲೆ ಕಣ್ಣಿಟ್ಟಿದ್ದ ಉಗ್ರರು ವಿದ್ವಂಸಕ ಕೃತ್ಯ ನಡೆಸುವ ಹುನ್ನಾರ ನಡೆಸಿದ್ದರು. ಇದಲ್ಲದೆ, ಉಡುಪಿ ಶ್ರೀಕೃಷ್ಣ ದೇವಾಲಯ ಹಾಗೂ ಹುಬ್ಬಳ್ಳಿಯ ಸಿದ್ಧಾರೂಡ ಮಠದ ಮೇಲೆ ದಾಳಿ ನಡೆಸುವ ಹುನ್ನಾರ ನಡೆಸಿದ್ದರೆಂಬ ಅಂಶ ಬೆಳಕಿಗೆ ಬಂದಿದೆ.
ಈ ಎಲ್ಲಾ ಮಾಹಿತಿಗಳ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ಸ್ಥಳಗಳಲ್ಲಿ ತೀವ್ರ ಕಟ್ಟೆಚ್ಚರ ಮಾಡಲಾಗಿದ್ದು, ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
|