ಶಾಂತಿ ಸುವ್ಯವಸ್ಥೆಗೆ ಹೆಸರಾಗಿದ್ದ ಕರ್ನಾಟಕ ಇನ್ನೊಂದು ಕಾಶ್ಮೀರವಾಗಿ ಬದಲಾಗುತ್ತಿರುವುದು ತೀವ್ರ ಕಳವಳವನ್ನುಂಟು ಮಾಡಿದೆ. ಇದುವರೆಗೆ ಕರ್ನಾಟಕದಲ್ಲಿ ಭಟ್ಕಳ, ಬೀದರ್, ಗುಲ್ಬರ್ಗಾದಂತಹ ಕೆಲವೇ ನಗರಗಳಿಗೆ ಮಾತ್ರ ಸೀಮಿತವಾಗಿದ್ದ ಭಯೋತ್ಪಾದನೆ, ಹುಬ್ಬಳ್ಳಿ ಮತ್ತು ದಾವಣಗೆರೆಗಳಿಗೆ ಹಬ್ಬಿರುವುದನ್ನು ನೋಡಿದರೆ ರಾಜ್ಯದ ಯಾವುದೇ ನಗರ ಮತ್ತು ಗ್ರಾಮ ಈ ಪಿಡುಗಿನಿಂದ ಮುಕ್ತವಾಗಿಲ್ಲ ಎಂಬ ಭಾವನೆ ಮೂಡುತ್ತದೆ ಎಂದು ರಾಷ್ಟ್ರೀಯ ಶ್ರೀರಾಮ ಸೇನಾ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
ಸೋಮವಾರ ಮಧ್ಯಾಹ್ನ ನಗರದ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಇಷ್ಟೊಂದು ವ್ಯಾಪಕವಾಗಿ ಹಬ್ಬಲು ಪೊಲೀಸ್ ಮತ್ತು ಗುಪ್ತಚರ ವೈಫಲ್ಯವೇ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಕಳೆದ 6 ತಿಂಗಳಿಂದ ರಾಜ್ಯದಲ್ಲಿ ಭಯೋತ್ಪಾದಕರ ಚಲನವಲನ ಹೆಚ್ಚುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಿದ ಶ್ರೀರಾಮ ಸೇನೆಯ ಗುಪ್ತಚರ ವಿಭಾಗ, ಬೇರೆ ಬೇರೆ ಸಂದರ್ಭಗಳಲ್ಲಿ ಆ ಮಾಹಿತಿಯನ್ನು ಬಹಿರಂಗಪಡಿಸಿತ್ತು. ಆದರೆ ಇದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸದೆ ಇದ್ದುದರಿಂದ ಈಗ ಭಾರೀ ಬೆಲೆ ತೆರಬೇಕಾಗಿದೆ ಎಂದು ಆಪಾದಿಸಿದರು.
ಹುಬ್ಬಳ್ಳಿ ಇಂದು ಇಸ್ಲಾಮಿಕ್ ಭಯೋತ್ಪಾದಕ ಜಾಲದ ಕೇಂದ್ರವಾಗಿ ಬೆಳೆಯುತ್ತಿರುವುದು ಇತ್ತೀಚಿನ ಕಿಮ್ಸ್ ವೈದ್ಯಕೀಯ ವಿದ್ಯಾಲಯದ ಪ್ರಕರಣದಿಂದ ದೃಢಪಟ್ಟಿದೆ. ಹುಬ್ಬಳ್ಳಿ, ದಾವಣಗೆರೆ, ಬೆಳಗಾವಿ, ಭಟ್ಕಳಗಳಲ್ಲಿ ಖಚಿತ ಮಾಹಿತಿ ನೀಡಿದಾಗ ಅದನ್ನು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ನಾರಾಯಣ ನಡುಮನಿ ಅಲ್ಲಗೆಳೆದಿದ್ದರು. ದಾವಣಗೆರೆ, ಹುಬ್ಬಳ್ಳಿಗಳಲ್ಲಿ ಬಂಧಿಸಲಾದ ವ್ಯಕ್ತಿಗಳು ಭಯೋತ್ಪಾದಕರಲ್ಲ, ಕೇವಲ ಬೈಕ್ ಕಳ್ಳರು ಎಂಬ ಹೇಳಿಕೆ ನೀಡಿದ್ದ ಅವರ ಕರ್ತವ್ಯ ನಿಷ್ಠೆಯನ್ನೇ ಪ್ರಶ್ನಿಸಬೇಕಾಗಿದೆ. ಕಿಮ್ಸ್ ವೈದ್ಯಕೀಯ ವಿದ್ಯಾಲಯದಲ್ಲಿ ಬಂಧಿಸಲಾದ ಆಸಿಫ್ ಅಲ್ ಖಾಯಿದಾ ಏಜೆಂಟ್ ಎಂಬುದು ಈಗ ಬಹಿರಂಗಗೊಂಡಿರುವುದರಿಂದ ನಡುಮನಿಯವರನ್ನೇ ಮೊದಲು ವಿಚಾರಣೆಗೆ ಒಳಪಡಿಸಬೇಕಾಗಿದೆ. ಹಾಗೆ ಮಾಡಿದರೆ ಇನ್ನಷ್ಟು ಭಯಾನಕ ಮಾಹಿತಿಗಳು ಬಹಿರಂಗಗೊಳ್ಳುತ್ತವೆ. ಇವರೊಂದಿಗೆ ಮತ್ತೊಬ್ಬ ಪೊಲೀಸ್ ಶಾಮೀಲಾದ ಬಗ್ಗೆ ಈಗಾಗಲೇ ಬಯಲಿಗೆ ಬಂದಿದ್ದು, ಇದು ಪೊಲೀಸ್ ವ್ಯವಸ್ಥೆಯನ್ನೇ ಪ್ರಶ್ನಿಸುವಂತಾಗಿದೆ ಎಂದು ಮುತಾಲಿಕ್ ಆರೋಪಿಸಿದರು.
ಖೋಟಾ ನೋಟು ಚಲಾವಣೆ, ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ, ಬಾಂಬ್ ತಯಾರಿಕೆ, ಮಾದಕ ದ್ರವ್ಯ ಸರಬರಾಜು, ಹಿಂದೂ ಹುಡುಗಿಯರ ಅಪಹರಣ, ಶ್ರದ್ದಾ ಕೇಂದ್ರಗಳ ಮೇಲೆ ದಾಳಿ ಇವೆಲ್ಲದರ ಹಿಂದೆ ಉಗ್ರರ ವ್ಯವಸ್ಥಿತ ಯೋಜನೆ ಇರುವುದನ್ನು ಅಲ್ಲಗೆಳೆಯಲಾಗದು. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಇನ್ನು ಕೆಲವೇ ದಿನಗಳಲ್ಲಿ ಇಸ್ಲಾಮಿಕ್ ಉಗ್ರರು, ಇಂಜಿನಿಯರಿಂಗ್, ವೈದ್ಯಕೀಯ, ಬ್ಯಾಂಕಿಂಗ್, ಮಾಹಿತಿ-ತಂತ್ರಜ್ಞಾನ, ವಿಜ್ಞಾನ, ಮಿಲಿಟರಿ ಕ್ಷೇತ್ರಗಳಲ್ಲಿ ಸಂಪೂರ್ಣವಾಗಿ ಪ್ರವೇಶಿಸಿ ದೇಶದ ಚುಕ್ಕಾಣಿಯನ್ನು ತಮ್ಮ ಕೈಗೆ ತೆಗೆದುಕೊಳ್ಳುವ ಭಯಂಕರ ಅಪಾಯವಿದೆ ಎಂದು ಮುತಾಲಿಕ್ ಹೇಳಿದರು.
|