ರಾಜರಾಜೇಶ್ವರಿ ನಗರದ ಆಂದ್ರಬ್ಯಾಂಕ್ ಶಾಖೆಗೆ ನುಗ್ಗಿದ ಡಕಾಯಿತರು ಲಕ್ಷಾಂತರ ರೂ. ಲೂಟಿ ಮಾಡಿ ಪರಾರಿಯಾದ ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ.
ಮಧ್ಯಾಹ್ನ ಸುಮಾರು 1.30ರ ಹೊತ್ತಿಗೆ ಬ್ಯಾಂಕಿಗೆ ನುಗ್ಗಿ ಸಿಬ್ಬಂದಿಗಳಿಗೆ ಬೆದರಿಸಿದ ಐವರು ಡಕಾಯಿತರು, ಸುಮಾರು 7ಲಕ್ಷ ರೂ.ನಗದನ್ನು ದೋಚಿ ಪರಾರಿಯಾಗಿದ್ದಾರೆಂದು ತಿಳಿದು ಬಂದಿದೆ.
ಡಕಾಯಿತರು ಹಿಂದಿ ಭಾಷೆ ಮಾತನಾಡುತ್ತಿದ್ದು, ಬಿಹಾರಿ ಮೂಲದವರು ಎಂದು ತಿಳಿಯಲಾಗಿದೆ. ಹತ್ತು ನಿಮಿಷದಲ್ಲಿ ಈ ಕಾರ್ಯಾಚರಣೆ ಮುಗಿಸಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಆಗಮಿಸಿದ್ದು, ಶ್ವಾನದಳದ ನೆರವಿನೊಂದಿಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಬ್ಯಾಂಕಿನಲ್ಲಿ ಸಿಸಿಟಿವಿ ಅಳವಡಿಸದ ಕಾರಣ ತನಿಖೆಗೆ ಹಿನ್ನಡೆಯುಂಟಾಗಿದೆ ಎಂದು ತಿಳಿದು ಬಂದಿದೆ.
ಊಟದ ಸಮಯದಲ್ಲಿ ಡಕಾಯಿತರು ಬ್ಯಾಂಕಿಗೆ ನುಗ್ಗಿ ತಮ್ಮ ಕೈಯಲ್ಲಿದ್ದ ರಿವಾಲ್ವರ್ ಹಾಗೂ ಚಾಕುಗಳನ್ನು ತೋರಿಸಿ, ಎಲ್ಲರನ್ನು ಕೋಣೆಯಲ್ಲಿ ಕೂಡಿ ಹಾಕಿದರು. ಹಣ ಕೊಡುವಂತೆ ಮ್ಯಾನೇಜರ್‌ಗೆ ಬೆದರಿಸಿ ಹಣ ದರೋಡೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
|