ಬಿಜಾಪುರದ ಮಹಿಳಾ ವಿಶ್ವವಿದ್ಯಾನಿಲಯದ ಸಿಂಡಿಕೇಟ್‌ಗೆ ಆಂಧ್ರಪ್ರದೇಶದ ಶಾಸಕಿಯೊಬ್ಬರನ್ನು ನೇಮಕ ಮಾಡಿರುವ ರಾಜ್ಯಪಾಲರ ಕ್ರಮಕ್ಕೆ ರಾಜ್ಯಾದ್ಯಾಂತ ವ್ಯಾಪಕ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ.
ರಾಜ್ಯಪಾಲರ ಈ ಕ್ರಮವನ್ನು ವಿರೋಧಿಸಿರುವ ಕನ್ನಡ ಪರ ಸಂಘಟನೆಗಳು ಪ್ರತಿಭಟನೆಗೆ ಇಳಿದಿವೆ. ನೇಮಕವನ್ನು ಹಿಂದಕ್ಕೆ ಪಡೆಯದಿದ್ದರೆ ಮುಂದಿನ ದಿನಗಳಲ್ಲಿ ತೀವ್ರವಾಗಿ ಚಳುವಳಿ ನಡೆಸುವುದಾಗಿ ಕನ್ನಡ ಸಂಘಗಳು ಎಚ್ಚರಿಕೆ ನೀಡಿವೆ. ಈ ಮೊದಲೇ ರೈಲ್ವೆ ನೇಮಕಾತಿ ವಿವಾದ ಬಳಿಕ ಈಗ ಮತ್ತೆ ಹೊರರಾಜ್ಯದವರನ್ನು ಕನ್ನಡ ವಿಶ್ವವಿದ್ಯಾಲಯಕ್ಕೆ ನೇಮಕ ಮಾಡಿರುವುದು ಕನ್ನಡ ಸಂಘಗಳ ಕೆಂಗಣ್ಣಿಗೆ ಗುರಿಯಾಗಿದೆ.
ಈ ನಡುವೆ ರಾಜ್ಯ ರಾಜಕೀಯ ಪಕ್ಷಗಳು ಈ ನೇಮಕವನ್ನು ಖಂಡಿಸಿವೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು, ರೈಲ್ವೆ ನೇಮಕಾತಿ ವಿವಾದದ ನಂತರ ಮತ್ತೊಮ್ಮೆ ಕನ್ನಡಿಗರ ಸ್ವಾಭಿಮಾನದ ಮೇಲೆ ಸವಾರಿ ಮಾಡಿರುವುದು ಖಂಡನೀಯವಾಗಿದೆ. ಕರ್ನಾಟಕ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಬೇರೆ ರಾಜ್ಯದವರನ್ನು ನೇಮಿಸಿರುವ ರಾಜ್ಯಪಾಲರ ಈ ಕ್ರಮದ ಹಿಂದೆ ಕಾಂಗ್ರೆಸ್ ಕೈವಾಡವಿರುವುದು ಸ್ಪಷ್ಟವಾಗುತ್ತದೆ ಎಂದು ಹೇಳಿದ್ದಾರೆ.
ಈ ಮಧ್ಯೆ ಸ್ವತಃ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಈ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿರುವುದು ರಾಜಕೀಯದಲ್ಲಿ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
|