ಮಹಿಳಾ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯೆಯಾಗಿ ಆಂಧ್ರದ ಶಾಸಕಿ ಡಾ| ರಾಜಲಕ್ಷ್ಮಿಯವರನ್ನು ನೇಮಕಮಾಡಿರುವುದಕ್ಕೆ ವ್ಯಕ್ತವಾಗಿರುವ ವಿರೋಧಗಳ ಹಿನ್ನೆಲೆಯಲ್ಲಿ, ಈ ನೇಮಕಾತಿಯನ್ನು ಹಿಂಪಡೆಯಲು ರಾಜ್ಯಪಾಲ ರಾಮೇಶ್ವರ ಠಾಕೂರ್ ಮುಂದಾಗಿದ್ದಾರೆ.
ಬುಧವಾರ ತಡರಾತ್ರಿ ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ರಾಜಲಕ್ಷ್ಮಿಯವರ ಆಯ್ಕೆಯನ್ನು ಹಿಂಪಡೆಯುವಂತೆ ರಾಜ್ಯಪಾಲರು ನಿರ್ಧರಿಸಿದ್ದಾರೆ ಎಂದು ರಾಜಭವನದ ಮೂಲಗಳು ತಿಳಿಸಿವೆ.
ಕನ್ನಡ ರಕ್ಷಣಾ ವೇದಿಕೆ ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳು ನೇಮಕಾತಿಯನ್ನು ತೀವ್ರವಾಗಿ ಖಂಡಿಸಿದ್ದು, ರಾಜ್ಯಪಾಲರು ಈ ನಿರ್ಧಾರವನ್ನು ವಾಪಾಸ್ ಪಡೆಯದಿದ್ದರೆ ತೀವ್ರ ರೀತಿಯಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿವೆ.
ಅಲ್ಲದೆ, ಈ ನೇಮಕಾತಿಯನ್ನು ರಾಜಕೀಯ ಪಕ್ಷಗಳೂ ಖಂಡಿಸಿದ್ದು, ಕನ್ನಡಿಗರ ಸ್ವಾಭಿಮಾನದ ಮೇಲೆ ಸವಾರಿ ಮಾಡಲಾಗುತ್ತಿದೆ ಎಂದು ಬಿಜೆಪಿ, ಜೆಡಿಎಸ್ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದರೆ ಅತ್ತ ಕಾಂಗ್ರೆಸ್ ಕೂಡ ಇದನ್ನು ವಿರೋಧಿಸಿದ್ದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
|