ತಾಲಿಬಾನ್ ಸಂಪರ್ಕವಿರುವ ಬಂಧಿತ ಉಗ್ರರನ್ನು ಗುರುವಾರ ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೆ ಒಳಪಡಿಸಲು ಪೊಲೀಸ್ ಅಧಿಕಾರಿಗಳು ನಿರ್ಧರಿಸಿದ್ದು, ಬ್ರೈನ್ ಮ್ಯಾಪಿಂಗ್ ಹಾಗೂ ಪಾಲಿಗ್ರಾಫ್ ಪರೀಕ್ಷೆ ಬಳಿಕ ಮಂಪರು ಪರೀಕ್ಷೆ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.
ಬಂಧಿತರಾದ ಮಹಮದ್ ಗೌಸ್ ಹಾಗೂ ಆಸಿಫ್‌ನನ್ನು ಪರೀಕ್ಷೆಗೆ ಒಳಪಡಿಸಿದ ಬಳಿಕ ಇನ್ನೆರಡು ದಿನಗಳಲ್ಲಿ ಮತ್ತೆ ಹೊನ್ನಾಳ್ಳಿ ನ್ಯಾಯಾಲಯಕ್ಕೆ ಹೆಚ್ಚಿನ ವಿಚಾರಣೆಗೆ ಕರೆದುಕೊಂಡು ಹೋಗಬೇಕಾಗಿದೆ.
ಈ ಮಧ್ಯೆ, ಗುಜರಾತ್ ಮಾಜಿ ಗೃಹಸಚಿವ ಹರೇನ್ ಪಾಂಡ್ಯ ಹತ್ಯೆಯ ಪ್ರಮುಖ ಆರೋಪಿಯ ಮಗನಾಗಿರುವ ಮಹಮದ್ ಗೌಸ್ ವಿಚಾರಣೆ ವೇಳೆ ತನ್ನ ತಂದೆ 11 ಮಾದರಿಗಳಲ್ಲಿ ಬಾಂಬ್ ಸ್ಪೋಟಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದರು. ಇವರಿಂದ ಭಯೋತ್ಪಾದಕ ವಿದ್ಯೆ ಕಲಿತಿದ್ದೇನೆ ಎಂದು ತಿಳಿಸಿದ್ದಾನೆ.
ಶಂಕಿತ ಉಗ್ರರಲ್ಲಿ ಒಬ್ಬನಾದ ಕಿಮ್ಸ್ ವಿದ್ಯಾರ್ಥಿ ಆಸಿಫ್‌ನನ್ನು ಕರೆದುಕೊಂಡು ವಿದ್ಯಾರ್ಥಿ ನಿಲಯಕ್ಕೆ ಈಗಾಗಲೇ ಭೇಟಿ ನೀಡಿರುವ ಗುಪ್ತಚರ ಇಲಾಖೆ ಅಧಿಕಾರಿಗಳು, ಈತನ ಸಹಪಾಠಿಯೊಬ್ಬನ ರೂಮ್‌ನಲ್ಲಿ ಧಾರ್ಮಿಕ ಪುಸ್ತಕಗಳು ಹಾಗೂ ಇತರ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರಲ್ಲದೆ, ಆತನಿಗಾಗಿ ಹುಡುಕಾಟದಲ್ಲಿದ್ದಾರೆ. ಆಸಿಫ್ ಸಂಗಡಿಗರೊಂದಿಗೆ ಊಟ ಮಾಡುತ್ತಿದ್ದ ಸ್ಥಳಗಳಿಗೆ ಭೇಟಿ ನೀಡಿದ್ದು, ತೀವ್ರ ಶೋಧ ನಡೆಸಿದ್ದಾರೆ.
ಈ ಮಧ್ಯೆ, ಹಳಿಯಾಳದಲ್ಲಿ ಕಾಡಂಚಿನ ಗ್ರಾಮಗಳಲ್ಲಿ ಉಗ್ರರು ಬಂದೂಕು ಅಭ್ಯಾಸ ಹಾಗೂ ರಹಸ್ಯ ಸಭೆಗಳನ್ನು ಆಯೋಜಿಸಿದ್ದರು. ಗ್ರಾಮಸ್ಥರಿಗೆ ತಿಳಿಯದ ರೀತಿಯಲ್ಲಿ ಕಾರ್ಯಾಚರಣೆ ನಡೆಸಿದ್ದರು ಎಂದು ತಿಳಿದು ಬಂದಿದೆ.
|