ಜೆಡಿಎಸ್ ಮುಖ್ಯಸ್ಥ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ತಮ್ಮದೇ ಪಕ್ಷದ ಎರಡು ಬಣಗಳ ಸಭೆಯಲ್ಲಿ ಪ್ರತ್ಯೇಕವಾಗಿ ಮಾತನಾಡಬೇಕಾದ ಪ್ರಸಂಗ ಹಾವೇರಿ ನಿರೀಕ್ಷಣಾ ಮಂದಿರದಲ್ಲಿ ನಡೆದಿದ್ದು, ಪಕ್ಷದೊಳಗಿರುವ ಆಂತರಿಕ ಭಿನ್ನಮತ ಬೀದಿಗೆ ಬಂದಿದೆ.
ದೇವೇಗೌಡರು ಜಿಲ್ಲಾ ಪ್ರವಾಸದ ವೇಳೆ ಹಾವೇರಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಜೆಡಿಎಸ್‌ನ ಎರಡು ಗುಂಪುಗಳ ಸದಸ್ಯರು ಪ್ರತ್ಯೇಕವಾಗಿ ಸಭೆ ಏರ್ಪಡಿಸಿದ್ದರು. ಈ ಗೊಂದಲದಿಂದ ಸಭೆ ನಡೆಯುವುದು ಅನಿಶ್ಚಿತವಾದಾಗ ಸ್ವತಃ ದೇವೇಗೌಡರೇ ಎರಡು ಗುಂಪಿನ ಮುಖಂಡರೊಂದಿಗೆ ಮಾತುಕತೆಗೆ ಮುಂದಾದರು. ಆದರೆ ಸಮಸ್ಯೆ ಮಾತ್ರ ಬಗೆಹರಿಸಲಾಗಲಿಲ್ಲ. ಬಳಿಕ ಮಾಜಿ ಸಚಿವ ಬಸವರಾಜ್ ಹೊರಟ್ಟಿ ಹಾಗೂ ಜೆಡಿಎಸ್ ಅಧ್ಯಕ್ಷ ಮೆರಾಜುದ್ದೀನ್ ಪಾಟೀಲ್ ಸಂಧಾನಕ್ಕೆ ಪ್ರಯತ್ನಿಸಿದಾದರೂ ಫಲಕಾರಿಯಾಗಲಿಲ್ಲ.
ಈ ಹಿನ್ನೆಲೆಯಲ್ಲಿ ಎರಡು ಗುಂಪುಗಳ ಕಾರ್ಯಕರ್ತರು ಆಯೋಜಿಸಿದ್ದ ಪ್ರತ್ಯೇಕ ಸಮಾರಂಭಕ್ಕೆ ದೇವೇಗೌಡರು ಹಾಜರಾಗಿ ಸಭೆ ನಡೆಸಬೇಕಾಯಿತು. ಈ ಮೂಲಕ ಕಾವು ತಣ್ಣಗಾದರೂ ಜೆಡಿಎಸ್ ಭಿನ್ನಮತ, ಗುಂಪುಗಾರಿಕೆ ಬಹಿರಂಗವಾಗೇ ಸ್ಪೋಟಗೊಂಡಿರುವುದು ಸ್ಪಷ್ಟವಾಗಿದೆ.
ಬಳಿಕ ಮಾತನಾಡಿದ ದೇವೇಗೌಡರು, ಪಕ್ಷದೊಳಗಿನ ಇಂತಹ ಆಂತರಿಕ ಭಿನ್ನಾಭಿಪ್ರಾಯವನ್ನು ಪರಿಹರಿಸಲು ಮಾರ್ಗವನ್ನು ಸೂಚಿಸಿದೆ. ಇದು ಸಕಾರಾತ್ಮಕ ಬೆಳವಣಿಗೆಯಾಗಿದ್ದು, ಪಕ್ಷವನ್ನು ಬಲಪಡಿಸಲು ಪ್ರೇರಕವಾಗಿದೆ ಎಂದು ಹೇಳಿದರು.
|