ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಬಿಜಾಪುರ ಮಹಿಳಾ ವಿಶ್ವವಿದ್ಯಾಲಯದ ನೇಮಕದ ಆದೇಶವನ್ನು ರಾಜ್ಯಪಾಲ ರಾಮೇಶ್ವರ್ ಠಾಕೂರ್ ಹಿಂದಕ್ಕೆ ಪಡೆದಿದ್ದಾರೆ.
ಮಹಿಳಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಮಿತಿಗೆ ಆಂಧ್ರ ಪ್ರದೇಶದ ವಿಧಾನ ಪರಿಷತ್ ಸದಸ್ಯೆ ರಾಜ್ಯಲಕ್ಷ್ಮೀ ಅವರನ್ನು ನೇಮಕ ಮಾಡುವಂತೆ ಈ ಹಿಂದೆ ಆದೇಶ ಹೊರಡಿಸಲಾಗಿತ್ತು.
ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಇತರ ಕನ್ನಡ ಪರ ಸಂಘಟನೆಗಳು ಈ ನೇಮಕವನ್ನು ಹಿಂದಕ್ಕೆ ಪಡೆಯುವಂತೆ ಪ್ರತಿಭಟನೆ ನಡೆಸಿದ್ದವು. ಅಲ್ಲದೆ, ರಾಜಕೀಯ ಪಕ್ಷಗಳು ಈ ಬಗ್ಗೆ ತಕರಾರು ಮಾಡಿದ ಪರಿಣಾಮ ಈ ನಿರ್ಣಯಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ, ಸ್ವತಃ ಕಾಂಗ್ರೆಸ್ ಪಕ್ಷದ ನಾಯಕರು ಹೊರ ರಾಜ್ಯದವರನ್ನು ನೇಮಕ ಮಾಡುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಕೊನೆಗೆ ಈ ವಿವಾದಕ್ಕೆ ಮಂಗಳ ಹಾಡುವ ನಿಟ್ಟಿನಲ್ಲಿ ಕಾರ್ಯದರ್ಶಿಗಳ ಸಭೆ ಕರೆದು ಚರ್ಚಿಸಿ ರಾಜ್ಯದವರನ್ನೇ ನೇಮಿಸುವಂತೆ ನಿರ್ಣಯ ಕೈಗೊಳ್ಳಲಾಯಿತು ಎಂದು ತಿಳಿದು ಬಂದಿದೆ.
|