ಜೆಡಿಯು ನಾಯಕ ಹಾಗೂ ವಿಧಾನ ಪರಿಷತ್ತಿನ ಸದಸ್ಯ ಬಸವರಾಜ ಬೊಮ್ಮಾಯಿ ಸದ್ಯದಲ್ಲಿಯೇ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.
ಈ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಸೇರಿದಂತೆ ಹಲವು ನಾಯಕರ ಜೊತೆ ಬೊಮ್ಮಾಯಿ ಈಗಾಗಲೇ ಮಾತುಕತೆ ನಡೆಸಿದ್ದಾರೆ. ಈ ತಿಂಗಳ 9 ಅಥವಾ 10ರಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರವರ ಸಮ್ಮುಖದಲ್ಲಿ ಸಾಂಕೇತಿಕವಾಗಿ ಬಿಜೆಪಿ ಸೇರಲಿದ್ದು, ಬಳಿಕ ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಿ ಆ ಮೂಲಕ ತಮ್ಮ ಬೆಂಬಲಿಗರೊಂದಿಗೆ ಅಧಿಕೃತವಾಗಿ ಬಿಜೆಪಿ ಸೇರಲಿದ್ದಾರೆ ಎಂದು ಬಿಜೆಪಿ ಪಕ್ಷದ ಮೂಲಗಳು ತಿಳಿಸಿವೆ.
ಪಕ್ಷ ಸೇರುವ ಕುರಿತು ಬಸವರಾಜ ಬೊಮ್ಮಾಯಿ ಈ ಹಿಂದೆಯೇ ಚಿಂತನೆ ನಡೆಸಿದ್ದು, ಇತ್ತೀಚೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರ ಜೊತೆಯಲ್ಲಿ ಮಾತುಕತೆ ನಡೆಸಿದ್ದರು. ಅಲ್ಲದೆ, ಯಡಿಯೂರಪ್ಪನವರೊಂದಿಗೂ ಪ್ರಥಮ ಹಂತದ ಮಾತುಕತೆ ನಡೆಸಿದ್ದು, ಬಸವರಾಜ ಸೇರ್ಪಡೆಗೆ ಪಕ್ಷದಿಂದ ಹಸಿರು ನಿಶಾನೆ ದೊರೆತಿದೆ.
ಈ ಮಧ್ಯೆ, ಇದೇ ತಿಂಗಳು 13ರಂದು ಬಿಜೆಪಿ ಪಕ್ಷದ ರಾಷ್ಟ್ರೀಯ ಧುರೀಣ ಹಾಗೂ ಪ್ರಧಾನಿ ಅಭ್ಯರ್ಥಿಯಾಗಿರುವ ಲಾಲ್ ಕೃಷ್ಣ ಅಡ್ವಾಣಿ ದಾವಣಗೆರೆಗೆ ಆಗಮಿಸಲಿದ್ದು, ಅವರ ಸಮ್ಮುಖದಲ್ಲಿ ಜೆಡಿಎಸ್‌ನ ಮಾಜಿ ಶಾಸಕ ಏಕಾಂತಯ್ಯ, ಚಂದ್ರಣ್ಣ ಮೊದಲಾದ ನಾಯಕರು ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಸೇರಲಿದ್ದಾರೆ ಎಂದು ತಿಳಿದು ಬಂದಿದೆ.
|