ಖ್ಯಾತ ಸುಗಮ ಸಂಗೀತ ಗಾಯಕ ಹಾಗೂ ಸಂಗೀತ ನಿರ್ದೇಶಕ ಎಚ್.ಕೆ. ನಾರಾಯಣ ಅವರು ಶುಕ್ರವಾರ ತಮ್ಮ ಇಹಲೋಕದ ವ್ಯವಹಾರ ತೀರಿಸಿದರು.
ಗಾಯನದ ಕುರಿತು ಅಭಿರುಚಿ ಇಲ್ಲದವರಿಗೂ ಹಾಡುಗಳ ಹುಚ್ಚು ಬೆಳೆಸಿದ ಪ್ರಖ್ಯಾತಿ ಎಚ್.ಕೆ. ನಾರಾಯಣ ಅವರದ್ದು. ವಿದ್ಯುನ್ಮಾನ ಮಾಧ್ಯಮಗಳ ಭರಾಟೆ ಇಷ್ಟೊಂದು ಬೆಳೆಯದಿರುವ ಕಾಲದಲ್ಲಿ ಮತ್ತು ಕ್ಯಾಸೆಟ್ ಉದ್ಯಮ ವಿಶಾಲವಾಗಿ ಹಬ್ಬದಿರುವ ಕಾಲದಲ್ಲಿಯೂ ಸಂಗೀತಾಭಿಮಾನಿಗಳು ಆಕಾಶವಾಣಿಯಲ್ಲಿ ಬರುತ್ತಿದ್ದ ಎಚ್.ಕೆ. ನಾರಾಯಣರ ಭಾವಗೀತೆಗಳಿಗೆ ಕಾತರದಿಂದ ಕಾಯುತ್ತಿದ್ದ ದಿನಗಳೂ ಇದ್ದವು.
ಗೀತಗಾರುಡಿಗನೆಂದೇ ಪ್ರಸಿದ್ಧರಾದ ಕನ್ನಡದ ವರಕವಿ ದ.ರಾ. ಬೇಂದ್ರೆಯವರ 'ಶುಭನುಡಿಯೇ ಶಕುನದ ಹಕ್ಕಿ' ಗೀತೆಯನ್ನು ಎಚ್.ಕೆ. ನಾರಾಯಣ ಅವರ ಕಂಠ ಎಷ್ಟು ಜನಪ್ರಿಯಗೊಳಿಸಿತ್ತೆಂದರೆ, ಆಕಾಶವಾಣಿಯಲ್ಲಿ ಪ್ರತಿದಿನ ಬಿತ್ತರವಾಗುವ ಭಾವಗೀತೆಗಳ ಕಾರ್ಯಕ್ರಮದಲ್ಲಿ ಇಂದು ಈ ಗೀತೆ ಬಂದೇ ಬರುತ್ತದೆ ಎಂದು ಅಭಿಮಾನಿಗಳು ಬೆಟ್ ಕಟ್ಟುವಷ್ಟು.
ಪಿ. ಕಾಳಿಂಗರಾವ್‌ರಿಂದ ಪ್ರಾರಂಭವಾದ ಸುಗಮ ಸಂಗೀತ ಪ್ರಾಕಾರ ಮೈಸೂರು ಅನಂತಸ್ವಾಮಿ, ಸಿ. ಅಶ್ವತ್, ರತ್ನಮಾಲಾ ಪ್ರಕಾಶ್ ಇವರೇ ಮೊದಲಾದ ಕಲಾವಿದರಿಂದ ಈಗ ಸಾಕಷ್ಟು ಬೆಳೆದಿದೆಯಾದರೂ, ಅದಕ್ಕೊಂದು ಕೊಂಡಿಯಂತೆ ತಮ್ಮ ಪಾತ್ರ ನಿರ್ವಹಿಸಿದವರು ಎಚ್.ಕೆ. ನಾರಾಯಣ.
ಅಪ್ರತಿಮ ಪ್ರತಿಭಾವಂತರಾದ ನಾರಾಯಣ ಅವರು ಪ್ರಚಾರಕ್ಕಾಗಲೀ, ಕಾಸಿಗಾಗಲೀ ಹಪಹಪಿಸದೆ, ಎಲೆಮರೆಯ ಕಾಯಂತೆಯೇ ಉಳಿದು ಸಾಧನೆಯನ್ನು ಮೆರೆದದ್ದು ಅವರ ದೊಡ್ಡತನ. ದಶಕಗಳ ಹಿಂದೆ ಇವರ ಮನೆಯಲ್ಲಿ ಕಳ್ಳತನವಾದಾಗ ಸಂಗೀತಾಭಿಮಾನಿಗಳು ಕ್ಷಣಕಾಲ ವಿಚಲಿತರಾದರೂ, ಕಳ್ಳ ಕದ್ದಿದ್ದು ಇವರ ಸಂಗೀತವನ್ನಲ್ಲವಲ್ಲ ಎಂದು ಸಮಾಧಾನ ಪಟ್ಟುಕೊಂಡದ್ದರು. ಇದುವೇ ಎಚ್.ಕೆ. ನಾರಾಯಣರು ಸಂಪಾದಿಸಿದ ಆಸ್ತಿ.
|