ಜೆಡಿಎಸ್ ನಾಯಕರ ನಡೆಗಳಿಂದ ರೋಸಿ ಬಂಡಾಯವೆದ್ದ ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಕೊನೆಗೂ ತಮ್ಮ ಹೊಸ ಗಮ್ಯವನ್ನು ಕಂಡುಕೊಂಡಿದ್ದು ಕಾಂಗ್ರೆಸ್ ಪಕ್ಷದ ಕೈ ಹಿಡಿದಿದ್ದಾರೆ. ಇದರಿಂದ ತಿಂಗಳುಗಳಿಂದ ಎದ್ದಿದ್ದ ಊಹಾಪೋಹಗಳಿಗೆ ತೆರೆ ಬಿದ್ದಿದೆ.
ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಕಾಂಗ್ರೆಸ್ ಮುಖಂಡರ ಜೊತೆ ಮಾತುಕತೆ ನಡೆಸಿರುವ ಪ್ರಕಾಶ್, ತಮ್ಮ ಬಣದ ಸುಮಾರು 8-9 ಮಾಜಿ ಶಾಸಕರಿಗೆ ಟಿಕೆಟ್ ಸಿಗುವುದನ್ನು ಖಾತರಿ ಮಾಡಿಕೊಂಡ ಬಳಿಕ ಈ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಹೊಸಪೇಟೆಯಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸುವ ಮೂಲಕ ಅಧಿಕೃತವಾಗಿ ತಮ್ಮ ಬಣದೊಂದಿಗೆ ಹಾಗೂ ಬೆಂಬಲಿಗರೊಂದಿಗೆ ಎಂ.ಪಿ.ಪ್ರಕಾಶ್ ಕಾಂಗ್ರೆಸ್ ಸೇರಲಿದ್ದಾರೆ. ಈ ಸಮಾವೇಶಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಥವಾ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗಮಿಸುವಂತೆ ಸ್ವತಃ ಪ್ರಕಾಶ್ ಮನವಿ ಮಾಡಿದ್ದು, ಭಾಗವಹಿಸುವ ನಿರೀಕ್ಷೆ ಇದೆ ಎಂದು ಪ್ರಕಾಶ್ ತಿಳಿಸಿದ್ದಾರೆ.
ಈ ಮಧ್ಯೆ ಪ್ರಕಾಶ್ ಬಣದ ಮೂವರು ಮಾಜಿ ಶಾಸಕರಿಗೆ ಕಾಂಗ್ರೆಸ್‌ನಲ್ಲಿ ಟಿಕೆಟ್ ಸಿಗುವುದು ಕಷ್ಟ ಸಾಧ್ಯವಾಗಿರುವುರಿಂದ ಬಿಜೆಪಿ ಸೇರುವ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರಕಾಶ್ ಒಪ್ಪಿಗೆ ಸೂಚಿಸಿದ್ದು, ಅವರು ಯಾವ ಪಕ್ಷವನ್ನು ಸೇರಿದರೂ ಅಡ್ಡಿಯಿಲ್ಲ ಎಂದಿದ್ದಾರೆನ್ನಲಾಗಿದೆ.
ಜೆಡಿಎಸ್ ಪಕ್ಷವನ್ನು ತೊರೆದಾಗಿನಿಂದ ರಾಜ್ಯ ರಾಜಕೀಯದಲ್ಲಿ ಪ್ರಕಾಶ್ ಯಾವ ಪಕ್ಷವನ್ನು ಸೇರುತ್ತಾರೆಂಬುದು ಕುತೂಹಲದ ಪ್ರಶ್ನೆಯಾಗಿತ್ತು. ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಕಾಶ್‌ರನ್ನು ತಮ್ಮೆಡೆಗೆ ಸೆಳೆಯುವಂತೆ ಹಲವು ರಾಜಕೀಯ ಪಕ್ಷಗಳು ಕಸರತ್ತು ನಡೆಸಿದ್ದವಾದರೂ, ತಮ್ಮ ಬಣದ ಹಿತದೃಷ್ಟಿಯನ್ನು ಪರಿಗಣಿಸಿ ಕಾಂಗ್ರೆಸ್ ತಮಗೆ ಸೂಕ್ತ ನೆಲೆ ಎಂದು ಪ್ರಕಾಶ್ ಕಂಡುಕೊಂಡಿದ್ದಾರೆ. ಈ ಹಿಂದೆ ಅವರು ಬಿಜೆಪಿ ಸೇರುವುದು ಖಾತ್ರಿ ಎಂಬಂತೆ ಸುದ್ದಿ ಹರಡಿದ್ದರೂ, ಕೊನೆಯಲ್ಲಿ ಬಿಜೆಪಿಯೊಳಗೆ ಇವರ ಸೇರ್ಪಡೆ ಕುರಿತು ಅಸಮಾಧಾನ ಎದ್ದಿದ್ದ ಕಾರಣ ಅವರು ತಮ್ಮ ನಿರ್ಧಾರ ಹಿಂತೆಗೆದುಕೊಂಡಿದ್ದರು.
|