ರಾಜ್ಯ ಮುಖ್ಯ ಕಾರ್ಯದರ್ಶಿಯಾಗಿ ಸುಧಾಕರ್ ರಾವ್ ಅವರನ್ನು ರಾಜ್ಯಪಾಲ ರಾಮೇಶ್ವರ ಠಾಕೂರ್ ನೇಮಿಸಿರುವ ಕ್ರಮವನ್ನು ಪ್ರಶ್ನಿಸಿ, ಐಎಎಸ್ ಅಧಿಕಾರಿ ದಿಲೀಪ್ ರಾವ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.
ಈ ನೇಮಕದ ಕುರಿತು ರಾಜ್ಯಪಾಲರು ಹಿರಿಯ ಐಎಎಸ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸದೆ, ದಿಢೀರ್ ಕ್ರಮ ಕೈಗೊಂಡಿದ್ದಾರಲ್ಲದೆ ಮತ್ತು ಸುಧಾಕರ್ ರಾವ್ ತಮಗಿಂತ ಕಿರಿಯ ಅಧಿಕಾರಿಯಾಗಿದ್ದು ತನ್ನ ಸೇವಾ ಹಿರಿತನವನ್ನು ಕಡೆಗಣಿಸಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ. ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ನ್ಯಾಯಾಲಯವು ಮಾರ್ಚ್ 6ಕ್ಕೆ ಪ್ರಕರಣದ ವಿಚಾರಣೆಯನ್ನು ಮುಂದೂಡಿದೆ.
ರಾಷ್ಟ್ರಪತಿ ಆಡಳಿತದಲ್ಲಿ ಇದೇ ಮೊದಲ ಬಾರಿಗೆ ಮುಖ್ಯ ಕಾರ್ಯದರ್ಶಿ ಆಯ್ಕೆಯನ್ನು ಮಾಡಿರುವ ರಾಜ್ಯಪಾಲರು ಶಿಷ್ಟಾಚಾರ ಮರೆತು ಈ ನಿರ್ಣಯ ಕೈಗೊಂಡಿದ್ದಾರೆ ಎಂದು ದಿಲೀಪ್ ಅರ್ಜಿಯಲ್ಲಿ ದೂರಿದ್ದಾರೆ.
ಈ ಮಧ್ಯೆ ಮುಖ್ಯಕಾರ್ಯದರ್ಶಿ ನೇಮಕಾತಿಯಲ್ಲಿ ಕಾಂಗ್ರೆಸ್ ಹಸ್ತಕ್ಷೇಪ ಮಾಡಿರುವುದು ಸ್ಪಷ್ಟವಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಜೆಡಿಎಸ್ ಪಕ್ಷವೂ ಸಹ ನೇಮಕಾತಿಯನ್ನು ತೀವ್ರವಾಗಿ ಖಂಡಿಸಿದ್ದು, ಇದೊಂದು ರಾಜಕೀಯ ಪ್ರೇರಿತ ನೇಮಕವಾಗಿದ್ದು ರಾಜ್ಯಪಾಲರು ಈ ನಿರ್ಧಾರಕ್ಕೆ ಕಾರಣ ನೀಡಬೇಕು ಎಂದು ಒತ್ತಾಯಿಸಿದೆ.
|