ಇಬ್ಬರು ಮಹಿಳೆಯರ ಸಹಿತ, ಒಂದೇ ಕುಟುಂಬದ ಮೂರು ಮಂದಿಯನ್ನು ಭೀಕರವಾಗಿ ಕೊಂದಿರುವ ಘಟನೆ ಮುಳಬಾಗಲು ಪಟ್ಟಣದಲ್ಲಿ ಸಂಭವಿಸಿದೆ.
ಮೃತರನ್ನು ಲಲಿತಾ, ಮುನಿವೆಂಕಟಮ್ಮ ಹಾಗೂ ಅನಿಲ್ ಎಂದು ಗುರುತಿಸಲಾಗಿದೆ. ಮುಳಬಾಗಲು ತಾಲ್ಲೂಕಿನ ಬೈಯ್ಯಪ್ಪನಹಳ್ಳಿ ಗ್ರಾಮದವರಾದ ಲಲಿತಾ ಬಾಡಿಗೆ ಮನೆಯಲ್ಲಿ ಟೈಲರಿಂಗ್ ವೃತ್ತಿ ನಡೆಸುತ್ತಿದ್ದರು. ಸಂಬಂಧಿ ನರೇಶ್ ಹಾಗೂ ಅಣ್ಣನ ಮಗ ಅನಿಲ್ ಕುಮಾರ್ ಅವರನ್ನು ತಮ್ಮ ಮನೆಯಲ್ಲಿಯೇ ಅವರು ಇರಿಸಿಕೊಂಡಿದ್ದರು.
ತಾಯಿ ಬಂದದ್ದರಿಂದ ಮಲಗಲು ಸ್ಥಳ ಸಾಕಾಗುವುದಿಲ್ಲ ಎಂದು ನರೇಶ್ ಬೇರೆಡೆಗೆ ಮಲಗಲು ಹೋಗಿದ್ದರು. ಆದರೆ ಮನೆಗೆ ವಾಪಸ್ ಬಂದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕೊಲೆಯಾದ ಮೂವರ ಪೈಕಿ ಅನಿಲ್ ಕುಮಾರ್ ಅವರನ್ನು ದಾರುಣವಾಗಿ ಹತ್ಯೆ ಮಾಡಲಾಗಿದ್ದು, ಕುಟುಂಬಕ್ಕೆ ಹತ್ತಿರವಿರುವವರೇ ಕೊಲೆ ಮಾಡಿರಬೇಕು, ಇಲ್ಲವೇ ಕುಟುಂಬದ ಭೂವಿವಾದದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬೇಕು ಎಂಬ ಅಭಿಪ್ರಾಯ ಈಗಾಗಲೇ ವ್ಯಕ್ತವಾಗಿದೆ.
ಈ ದುರ್ಘಟನೆ ಜಿಲ್ಲೆಯಾದ್ಯಂತ ಆತಂಕದ ವಾತಾವರಣ ಮೂಡಿಸಿದ್ದು, ಘಟನೆ ನಡೆದ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.
|