ಮಂಗಳೂರು ವಿವಿಯ ನಾಲ್ಕನೇ ಸೆಮಿಸ್ಟರ್‌ಗೆ ಪಠ್ಯರೂಪದಲ್ಲಿರುವ ಜ್ಞಾನಪೀಠ ಪುರಸ್ಕೃತ ಸಾಹಿತಿ ಯು.ಆರ್.ಅನಂತ ಮೂರ್ತಿ ಅವರ 'ಸಂಸ್ಕಾರ' ಕಾದಂಬರಿಯ ಅನುವಾದಿತ ಕೃತಿಯು ಅಸಭ್ಯ ಪದಗುಚ್ಛವನ್ನು ಒಳಗೊಂಡಿದೆ ಎಂಬ ಕಾರಣಕ್ಕೆ ಇದೀಗ ವಿವಾದದ ಗುಲ್ಲೆಬ್ಬಿಸಿದೆ.
'ಸಂಸ್ಕಾರ್' ಪಠ್ಯ ಕೃತಿಯಲ್ಲಿ ಪಾಠ ಮಾಡಲು ಮುಜುಗರವಾಗುವ ಕೆಲವೊಂದು ಪದ, ವಾಕ್ಯಗಳನ್ನು ಪ್ರಯೋಗಿಸಲಾಗಿದೆ, ಹೀಗಾಗಿ ವಿಶೇಷವಾಗಿ ಹೆಣ್ಣುಮಕ್ಕಳಿರುವ ತರಗತಿಗಳಲ್ಲಿ ಈ ಪಾಠ ಮಾಡುವಂತಿಲ್ಲ ಎಂಬುದು ಕೆಲವು ಹಿಂದಿ ಪ್ರಾಧ್ಯಾಪಕರ ದೂರು. ಈ ದೂರನ್ನು ಪರಿಗಣಿಸಿರುವ ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಎಂ.ಕಾವೇರಿಯಪ್ಪ ಅವರು, ಸೋಮವಾರ (ಫೆ.11) ವಿವಿ ಅಧ್ಯಯನ ಮಂಡಳಿಯ ಸಭೆ ಕರೆದಿದ್ದಾರೆ.
ಸಂಸ್ಕಾರ್ ಕಾದಂಬರಿಯನ್ನು 2006ರಲ್ಲಿ ಅಂದಿನ ಹಿಂದಿ ಅಧ್ಯಯನ ಸಮಿತಿ ಅಧ್ಯಕ್ಷ ಪ್ರೊ.ಭಾಸ್ಕರ ಮಯ್ಯ ನೇತೃತ್ವದ ಸಮಿತಿಯು ಶಿಫಾರಸು ಮಾಡಿತ್ತು. ಎರಡು ವರ್ಷಗಳ ಬಳಿಕ ಈಗ, ಇದರಲ್ಲಿ ಅಸಭ್ಯ ಪದ ಪ್ರಯೋಗವಿದೆ ಎಬ ಕಾರಣ ನೀಡಿ ಆಕ್ಷೇಪ ಎತ್ತಲಾಗುತ್ತಿದೆ. ಇದಕ್ಕೆ ಕೇವಲ ಅನಂತಮೂರ್ತಿ ವಿರುದ್ಧದ ದ್ವೇಷವೇ ಕಾರಣ ಹೊರತು ಬೇರೇನೂ ಅಲ್ಲ ಎಂದು ಈಗ ಅಧ್ಯಯನ ಮಂಡಳಿ ಸದಸ್ಯರಾಗಿರುವ ಭಾಸ್ಕರ ಮಯ್ಯ ಹೇಳುತ್ತಾರೆ.
ಇದು ನಾನ್ ಡೀಟೇಲ್ ಪಠ್ಯವಾದುದರಿಂದ ಬೋಧನೆಗೆ ಯಾವುದೇ ತೊಂದರೆಯಿಲ್ಲ ಎಂಬುದು ಅವರ ಸಮಜಾಯಿಷಿ.
ಈ ಸೆಮಿಸ್ಟರ್ ಮುಗಿಯಲು ಇನ್ನುಳಿದಿರುವುದು ಆರೇಳು ವಾರಗಳು. ಈ ಹಂತದಲ್ಲಿ ಪಠ್ಯವನ್ನೇ ರದ್ದುಪಡಿಸಿದರೆ ತೊಂದರೆಯಲ್ಲಿ ಸಿಲುಕುವವರು ವಿದ್ಯಾರ್ಥಿಗಳು ಎಂದಿರುವ ಅವರು, ಫೆ.11ರ ಸಭೆಯ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದೇವೆಯೇ ಹೊರತು, ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ತಮ್ಮ ಕೈಗೆ ಬಂದಿಲ್ಲ ಎಂದು ತಿಳಿಸಿದ್ದಾರೆ.
ಚಂದ್ರಕಾಂತ ಕುಸನೂರ ಅವರು ಅನಂತಮೂರ್ತಿಯವರ ಈ ಕೃತಿಯನ್ನು ಹಿಂದಿಗೆ ತರ್ಜುಮೆ ಮಾಡಿದ್ದರು. ಹಿಂದಿ ಅಧ್ಯಾಪಕ ಸಂಘದ ಪದಾಧಿಕಾರಿಗಳು 'ಸಂಸ್ಕಾರ' ಕೃತಿಯಲ್ಲಿರುವ ಅಶ್ಲೀಲ ಘಟನೆಗಳು ಮತ್ತು ಶಬ್ದಗಳ ಪಟ್ಟಿಯನ್ನು ಇತ್ತೀಚೆಗೆ ಕುಲಸಚಿವರಿಗೆ ನೀಡಿದ್ದಾರಲ್ಲದೆ, ಇದನ್ನು ಪಠ್ಯದಿಂದ ಕೈಬಿಡುವಂತೆ ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ.
|