ಸಂಯುಕ್ತ ಜನತಾದಳದ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಬಸವರಾಜ ಬೊಮ್ಮಾಯಿ ಶನಿವಾರ ಅಧಿಕೃತವಾಗಿ ಬಿಜೆಪಿಗೆ ಸೇರಿಕೊಂಡರು. ಅವರ ಸೇರ್ಪಡೆ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಸಂಸದ ಅನಂತ್ ಕುಮಾರ್, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಸಚಿವರಾದ ಈಶ್ವರಪ್ಪ, ಜಗದೀಶ್ ಶೆಟ್ಟರ್ ಹಾಗೂ ಇವರೆಲ್ಲರ ಬಣದ ಸದಸ್ಯರು ಹಾಜರಿದ್ದುದು ವಿಶೇಷವಾಗಿತ್ತು.
ಸಂಯುಕ್ತ ಜನತಾದಳವನ್ನು ಸಂಘಟಿಸಲು ಇನ್ನಿಲ್ಲದ ಪ್ರಯತ್ನ ಮಾಡಿದ ಬಸವರಾಜ ಬೊಮ್ಮಾಯಿ ತಮ್ಮ ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ ಬಿಜೆಪಿಗೆ ಸೇರಿಕೊಂಡಿರುವುದರಿಂದ ಉತ್ತರ ಕರ್ನಾಟಕದಲ್ಲಿ ಪಕ್ಷಕ್ಕೆ ಹೆಚ್ಚಿನ ಬಲ ಬಂದಂತಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಬಸವರಾಜ ಬೊಮ್ಮಾಯಿಯವರೊಂದಿಗೆ ಸಂಯುಕ್ತ ಜನತಾದಳದ ಮುಖಂಡರಾದ ಅಕ್ಕಿ, ಶಿವಣ್ಣ, ಆನಂದ್ ಚಂದ್ರಶೇಖರ್ ಮಹಾಮನಿ ಹಾಗೂ ಹೆಚ್ಚಿನ ಸಂಖ್ಯೆಯ ಬೆಂಬಲಿಗರು ಬಿಜೆಪಿಗೆ ಸೇರಿರುವುದರಿಂದ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಬಂದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇದರಿಂದಾಗಿ ಉತ್ತರ ಕರ್ನಾಟಕದಲ್ಲಿ ರಾಜಕೀಯ ಧ್ರುವೀಕರಣವಾಗುವ ಸಾಧ್ಯತೆಗಳಿವೆ ಎಂದು ಸಂಸದ ಅನಂತ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.
ಬಸವರಾಜ ಬೊಮ್ಮಾಯಿಯವರ ಸೇರ್ಪಡೆಯ ಸಂದರ್ಭದಲ್ಲಿಯೇ ಸವದತ್ತಿ ನಗರಸಭೆಯ ಜೆಡಿಯು ಸದಸ್ಯರೆಲ್ಲರೂ ಬಿಜೆಪಿಗೆ ಸೇರ್ಪಡೆಗೊಂಡಿದ್ದರಿಂದಾಗಿ ಬಹುಮತ ಹೆಚ್ಚಿ ನಗರಸಭೆ ಈಗ ಬಿಜೆಪಿಯ ಪಾಲಾದಂತಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
|