ಸಮಾಜ ಸೇವೆಗಿಂತ ವೈಯಕ್ತಿಕ ಹಿತಾಸಕ್ತಿಯೇ ಮುಖ್ಯ ಎಂದು ಭಾವಿಸಿರುವ ಇಂದಿನ ರಾಜಕಾರಣಿಗಳಲ್ಲಿ ಸೇವಾ ಮನೋಭಾವವೇ ದೂರವಾಗಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ವೆಂಕಟಾಚಲ ಹೇಳಿದ್ದಾರೆ.
ಎನ್‌ಜಿಒ ಸಭಾಂಗಣದಲ್ಲಿ ದಲಿತ ಪ್ರಗತಿಪರ ಒಕ್ಕೂಟ ಏರ್ಪಡಿಸಿದ್ದ ಸ್ವಾಭಿಮಾನ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ತುಳಿತಕ್ಕೊಳಗಾದವರಿಗೆ ಸರ್ಕಾರದ ಸೌಲಭ್ಯಗಳು ಸಿಗದಿರುವುದಕ್ಕೆ ಜನಪ್ರತಿನಿಧಿಗಳೇ ಕಾರಣ. ಅಂಬೇಡ್ಕರ್ ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ ಈ ಅವ್ಯವಸ್ಥೆ ಕೊನೆಗಾಣುತ್ತದೆ ಎಂದು ನುಡಿದರು.
ಮಾಧ್ಯಮ ಅಕಾಡೆಮಿ ಅಧ್ಯಕ್ಷ ವಿ.ಎನ್.ಸುಬ್ಬರಾವ್ ಅವರು ಮಾತನಾಡುತ್ತಾ, ದಲಿತರ ಮೇಲೆ ಇಂದಿಗೂ ದೌರ್ಜನ್ಯ ನಡೆಯುತ್ತಿರುವುದು ವಿಷಾದಕರ ಸಂಗತಿ. ಇಂತಹ ತರಬೇತಿ ಶಿಬಿರಗಳನ್ನು ನಡೆಸುವುದರ ಮೂಲಕ ದಲಿತರಲ್ಲಿ ಜಾಗೃತಿ ಮೂಡಿಸಿ ಅವರನ್ನೂ ಮುಖ್ಯವಾಹಿನಿಗೆ ತರಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ಇದಕ್ಕೆ ದನಿಗೂಡಿಸಿದ ಬಿಜೆಪಿ ಮುಖಂಡ ಡಿ.ಎಸ್.ವೀರಯ್ಯ, ದಲಿತರ ಪರವಾಗಿ ವಸ್ತುನಿಷ್ಠವಾಗಿ ಕೆಲಸ ಮಾಡದ ರಾಜಕಾರಣಿಗಳು ದಲಿತರನ್ನು ಕೇವಲ ಮತಬ್ಯಾಂಕುಗಳಾಗಿ ಪರಿಗಣಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.
|