ಪರ್ಯಾಯ ಮಹೋತ್ಸವಕ್ಕೆ ಸಂಬಂಧಿಸಿ ಇತ್ತೀಚಿಗೆ ಅಷ್ಟಮಠಗಳಲ್ಲಿ ನಡೆದ ವಿವಾದ ಹಾಗೂ ಜಗಳದ ಪರಿಸ್ಥಿತಿ ಬಿಜೆಪಿಯಲ್ಲಿಯೂ ಸದ್ಯದಲ್ಲಿಯೇ ಉಂಟಾಗಲಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಕುಹಕವಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಆ ಪಕ್ಷದಲ್ಲಿ ಈಗಾಗಲೇ ಹಲವು ಬಣಗಳ ನಡುವೆ ಒಳಜಗಳಗಳು ನಡೆಯುತ್ತಿದ್ದು ಅದು ಸದ್ಯದಲ್ಲಿಯೇ ಬೀದಿಗೆ ಬರಲಿದೆ ಎಂದು ತಿಳಿಸಿದರು.
ಜೆಡಿಎಸ್‌ನಲ್ಲಿ ಇರಬಹುದಾದ ಆಂತರಿಕ ಭಿನ್ನಮತ ಹಾಗೂ ಭಿನ್ನಾಭಿಪ್ರಾಯಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸದ್ಯದಲ್ಲಿಯೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ದೇವೇಗೌಡರು, ಈ ಉದ್ದೇಶದಿಂದಲೇ ಎಲ್ಲ ಜಿಲ್ಲೆಗಳಲ್ಲೂ ಪ್ರವಾಸ ಆರಂಭಿಸಿರುವುದಾಗಿ ತಿಳಿಸಿದರು.
ಪಕ್ಷಕ್ಕೆ ಯಾರು ಬೇಕಾದರೂ ಬರಬಹುದು ಎಂಬ ಮಾತನ್ನು ಪುನರುಚ್ಚರಿಸಿದ ಗೌಡರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಗುಣಮುಖರಾಗಲು ಇನ್ನೂ ಒಂದು ವಾರ ಕಾಲಾವಕಾಶ ಬೇಕಾಗುತ್ತದೆ. ಸದ್ಯದಲ್ಲಿಯೇ ಅವರು ರಾಜಕೀಯದಲ್ಲಿ ಸಕ್ರಿಯರಾಗಲಿದ್ದಾರೆ ಎಂದು ನುಡಿದರು.
|