ಉತ್ತರ ಪ್ರದೇಶ ಪೊಲೀಸರು ಭಾನುವಾರ ಸೆರೆ ಹಿಡಿದ ಆರು ಮಂದಿ ಉಗ್ರರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಮೇಲಿನ ದಾಳಿ ಪ್ರಕರಣದ ಪ್ರಮುಖ ರೂವಾರಿಯೂ ಸೇರಿದ್ದು, ಆತನ ವಿಚಾರಣೆಯ ನಿಟ್ಟಿನಲ್ಲಿ ಕರ್ನಾಟಕ ಪೊಲೀಸರ ತಂಡವೊಂದು ಉತ್ತರ ಪ್ರದೇಶಕ್ಕೆ ತೆರಳಿದೆ.
ಎರಡು ವರ್ಷಗಳ ಹಿಂದೆ ಐಐಎಸ್ಸಿ ದಾಳಿಯಲ್ಲಿ ಭಾಗಿಯಾಗಿದ್ದ ಉಗ್ರ ಸಲಾಹುದ್ದೀನ್, ಐಐಎಸ್ಸಿ ಮೇಲಿನ ದಾಳಿಯ ಸಲುವಾಗಿ ಬೆಂಗಳೂರಿನ ಕೋಣೆಯೊಂದರಲ್ಲಿ ರೂಪುರೇಷೆಗಳನ್ನು ಸಿದ್ಧಪಡಿಸಿದ್ದೆವು ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದ. ಉಗ್ರನಿಂದ ಈ ಮಾಹಿತಿ ಹೊರಬೀಳುತ್ತಿದ್ದಂತೆ ಕರ್ನಾಟಕ ಪೊಲೀಸರ ತಂಡವೊಂದು ಕೂಡಲೆ ಉತ್ತರ ಪ್ರದೇಶಕ್ಕೆ ತೆರಳಿದೆ.
ಉಗ್ರರ ವಿಚಾರಣೆಯನ್ನು ಕೈಗೊಂಡಿರುವ ಪೊಲೀಸರು ಹಲವು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಇತ್ತೀಚೆಗೆ ನಡೆದ ಪ್ರಮುಖ ದಾಳಿಗಳಲ್ಲಿ ಈ ಉಗ್ರರ ಕೈವಾಡವಿರುವುದು ಸ್ಪಷ್ಟವಾಗಿದೆ ಎಂದು ತಿಳಿದು ಬಂದಿದೆ.
ಉಗ್ರರಿಂದ ಐಐಎಸ್ಸಿ ದಾಳಿಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ತಮ್ಮ ವಶಕ್ಕೆ ಒಪ್ಪಿಸುವಂತೆ ಕರ್ನಾಟಕ ಪೊಲೀಸರು ಉತ್ತರಪ್ರದೇಶ ಸರಕಾರವನ್ನು ಕೋರಲಿದ್ದು, ಶೀಘ್ರವೇ ತನಿಖೆ ಆರಂಭಿಸಲಿದ್ದಾರೆ. ಐಐಎಸ್ಸಿ ದಾಳಿಯಲ್ಲಿ ಒಬ್ಬ ಪ್ರೊಫೆಸರ್ ಸಾವಿಗೀಡಾಗಿದ್ದರು.
|