ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಪ್ರೀತಿ ತುಂಬಿದ ಜೀವಸೆಲೆ' ಅರ್ತಿಕಜೆಗೆ ಆತ್ಮೀಯ ಸನ್ಮಾನ
WD
ಒಳ್ಳೆಯ ಕೆಲಸ ಮಾಡಿ ಒಳ್ಳೆಯ ರೀತಿಯಲ್ಲೇ ನಿವೃತ್ತರಾಗುವುದು ಒಂದು ದೊಡ್ಡ ವರವಿದ್ದಂತೆ. ಅದಕ್ಕೆ ಇಂದು ಶ್ರೀಕೃಷ್ಣ ಭಟ್ ಅರ್ತಿಕಜೆ ನಿದರ್ಶನ. ಹೊರನಾಡಲ್ಲಿ ಕನ್ನಡದ ಕಂಪು ಹರಡಿದ ಅರ್ತಿಕಜೆಯವರನ್ನು ಅಭಿನಂದಿಸುವ ಈ ಕಾರ್ಯಕ್ರಮ ನಿಜ ಅರ್ಥದಲ್ಲಿ 'ಸಜ್ಜನ ಸಲ್ಲಾಪ'ವಾಗಿದೆ ಎಂದು ಖ್ಯಾತ ಸಾಹಿತಿ, 'ನಾಡೋಜ' ಡಾ.ಹಂ.ಪ.ನಾಗರಾಜಯ್ಯ ಹೇಳಿದ್ದಾರೆ.

ಚೆನ್ನೈ ಕರ್ನಾಟಕ ಸಂಘದಲ್ಲಿ ಭಾನುವಾರ ಸಂಜೆ ಪ್ರೊ.ಶ್ರೀಕೃಷ್ಣ ಭಟ್ ಅರ್ತಿಕಜೆ ಹಾಗೂ ಸರಸ್ವತಿ ದಂಪತಿಗಳ ಸನ್ಮಾನ ಹಾಗೂ ಅಭಿನಂದನಾ ಗ್ರಂಥ 'ಅನನ್ಯ' ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿನಯಶೀಲ ಚೇತನಕ್ಕೆ ಸಲ್ಲಿಸಿದ 'ಅನನ್ಯ' ಅಭಿನಂದನಾ ಗ್ರಂಥವು ಹೆಸರಿನಷ್ಟೇ ಸಾರ್ಥಕ ಎಂದು ನುಡಿದರಲ್ಲದೆ, ಪ್ರೊ.ಶ್ರೀಕೃಷ್ಣ ಭಟ್ ಬದುಕು ಬಂಗಾರವಾಗಲಿ ಎಂದು ಆತ್ಮೀಯವಾಗಿ ಹಾರೈಸಿದರು.

'ಅನನ್ಯ' ಅಭಿನಂದನಾ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದ ಕರ್ನಾಟಕ ಮುಕ್ತ ವಿವಿ ಉಪಕುಲಪತಿ ಡಾ.ಬಿ.ಎ.ವಿವೇಕ ರೈ, ಕರ್ನಾಟಕದ ವಿವಿಗಳಲ್ಲಿ ಮಾಡಲಾಗದ ಕಾರ್ಯಗಳನ್ನು ಹೊರನಾಡಿನಲ್ಲಿದ್ದುಕೊಂಡು ಅರ್ತಿಕಜೆಯವರು ಮಾಡಿ ತೋರಿಸಿದ್ದಾರೆ. ಶ್ರೀಕೃಷ್ಣ ಎಂಬುದು ಅನ್ವರ್ಥಕ ನಾಮವಾಗಿದ್ದು, ಅದೆಷ್ಟೋ ಅರ್ಜುನರನ್ನು (ವಿದ್ಯಾರ್ಥಿಗಳನ್ನು) ಯುದ್ಧ ಕ್ಷೇತ್ರದಿಂದ ಓಡಿಹೋಗದಂತೆ ತಡೆದು ನಿಲ್ಲಿಸಿ, ಪದವಿ ಪೂರೈಸಿ ಸುಸಂಸ್ಕೃತವಾಗಿಸಿ ಕಳುಹಿಸಿದ್ದಾರೆ ಎಂದು ಶ್ಲಾಘಿಸಿದರು.

WD
ಮುಖ್ಯ ಅತಿಥಿ, ತಮಿಳುನಾಡಿನ ಮಾಜಿ ಆರೋಗ್ಯ ಸಚಿವ, ಕನ್ನಡಿಗರೇ ಆದ ಡಾ.ಎಚ್.ವಿ.ಹಂದೆ ಅವರು ಶ್ರೀಕೃಷ್ಣ ಭಟ್ ಜತೆಗಿನ ಒಡನಾಟವನ್ನು ನೆನಪಿಸಿಕೊಳ್ಳುತ್ತಾ, ಮದರಾಸು ವಿವಿಯಲ್ಲಿ ಮರಿಯಪ್ಪ ಭಟ್ಟರ ಸ್ಥಾನವನ್ನು ಸಮರ್ಪಕವಾಗಿ ತುಂಬಿದ್ದಾರೆ ಎಂದು ಶ್ಲಾಘಿಸಿದರು.

ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದ ಅರ್ತಿಕಜೆ ಅವರು, ಹೃದಯ ತುಂಬಿ ಬಂದಾಗ ಮಾತುಗಳು ಕಡಿಮೆಯಾಗುತ್ತವೆ ಎನ್ನುತ್ತಲೇ, ಕನ್ನಡ ನಾಡು ನುಡಿಯ ಸಾಗರದಲ್ಲಿ ನಾನು ಬಗೆದದ್ದು ಕೇವಲ ಒಂದು ಪುಟ್ಟ ಪಾತ್ರೆಯಷ್ಟು ನೀರು ಮಾತ್ರ ಎಂದರು. ಅಧ್ಯಾಪಕನಾದವನಿಗೆ ಜೀವನದ ಅತ್ಯಂತ ಪ್ರಮುಖ ವಿಷಯವೆಂದರೆ ಜ್ಞಾನ ಸಂಪತ್ತಿನ ಜತೆಗೆ ವಿದ್ಯಾರ್ಥಿ ಸಂಪತ್ತು. ಅಂತಹ ಅತ್ಯುತ್ತಮ ವಿದ್ಯಾರ್ಥಿ ಸಂಪತ್ತನ್ನು ಪಡೆದ ತಾನು ಧನ್ಯ. ಇದು ತನಗೆ ಮಾತ್ರ ದೊರೆತ ಗೌರವವಲ್ಲ, ಇಡೀ ಹೊರನಾಡ ಕನ್ನಡಿಗರಿಗೇ ಸಂದ ಸನ್ಮಾನ ಎಂದು ನುಡಿದು, ತಮ್ಮ ಏಳಿಗೆಗೆ ಕಾರಣರಾದವರೆಲ್ಲರನ್ನೂ ಸ್ಮರಿಸಿದರು.

WD
'ಅನನ್ಯ' ಅಭಿನಂದನಾ ಗ್ರಂಥ ಸಂಪಾದಕರಾದ ಮಂಗಳೂರು ವಿವಿಯ ಡಾ.ಕೆ.ಚಿನ್ನಪ್ಪ ಗೌಡ ಅವರು ಕೃತಿ ಪರಿಚಯ ಮಾಡಿಕೊಡುತ್ತಾ, ಅರ್ತಿ ಅಂದರೆ ಪ್ರೀತಿ, ಕಜೆ ಎಂದರೆ ಜೀವಸೆಲೆ ಎಂಬ ಅರ್ಥವೂ ಇದೆ. ಈ ಮಣ್ಣಿನಿಂದಲೇ ಬಂದ ಶ್ರೀಕೃಷ್ಣ ಭಟ್ಟರು ಪರಿಶ್ರಮಿಯಾಗಿದ್ದು, ಈ ಉನ್ನತಿಗೇರಿದ್ದಾರೆ ಎಂದರು. ಗ್ರಂಥದ ಸಲಹಾ ಸಂಪಾದಕ ಡಾ.ವಿ.ಗೋಪಾಲಕೃಷ್ಣ ಅವರು ಗ್ರಂಥಾವಲೋಕನಗೈದರು. ಪ್ರೊ. ಅರ್ತಿಕಜೆ ಅವರ ಶಿಷ್ಯರಾದ ಡಾ.ಶಿವಕುಮಾರ್ ಭರಣ್ಯರು ಗುರುಗಳ ಪರಿಚಯ ಮಾಡಿಕೊಟ್ಟರು.

ವೇದಿಕೆಯಲ್ಲಿ ಸಮಿತಿ ಗೌರವಾಧ್ಯಕ್ಷರಾದ ಡಾ.ಜಿ.ಆರ್.ಭಟ್ ಮತ್ತು ಡಾ.ಎಂ.ಜಿ.ಭಟ್ ಉಪಸ್ಥಿತರಿದ್ದರು. ಅರ್ತಿಕಜೆ ಪುತ್ರ ಎ.ಶ್ಯಾಮಪ್ರಕಾಶ್ ಅವರು ಸುಶ್ರಾವ್ಯವಾಗಿ ಪ್ರಾರ್ಥನೆ ಹಾಡಿದರು. ಕರ್ನಾಟಕ ಸಂಘದ ಅಧ್ಯಕ್ಷ ಕೆ.ಪಿ.ಆಚಾರ್ಯ ಸ್ವಾಗತಿಸಿದರು. ಕಾರ್ಯದರ್ಶಿ ಪಿ.ನಾರಾಯಣ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರ್ವಹಿಸಿದರು. ಕೋಶಾಧಿಕಾರಿ ಡಾ.ಎಚ್.ಗಣೇಶ್ ನಾಯಕ್ ವಂದಿಸಿದರು.

ಕಾರ್ಯಕ್ರಮಕ್ಕೆ ಮೊದಲು ವಸುಧಾ ಕೇಶವ್ ಮತ್ತು ಬಳಗದಿಂದ ಸುಶ್ರಾವ್ಯ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು.
ಮತ್ತಷ್ಟು
ರೈಲ್ವೇ ನೇಮಕ- ಕನ್ನಡಿಗರಿಗೆ ಅನ್ಯಾಯ ಆಗಿಲ್ಲ: ಲಾಲೂ
ಲಷ್ಕರ್ ಉಗ್ರನ ಸೆರೆ: ಕರ್ನಾಟಕ ಪೊಲೀಸರು ಉ.ಪ್ರ.ಕ್ಕೆ
ಕ್ರಿಕೆಟ್ ಬೆಟ್ಟಿಂಗ್ : ಇಬ್ಬರ ಬಂಧನ
ರಾಜ್ಯಪಾಲರು ಕಾಂಗ್ರೆಸ್ ಕೈಗೊಂಬೆ:ಖರ್ಗೆ ನಿರಾಕರಣೆ
ಶಂಕಿತ ಉಗ್ರರ ಕಸ್ಟಡಿ ವಿಸ್ತರಣೆ
ಬಿಜೆಪಿಯಲ್ಲೂ ಜಗಳ: ದೇವೇಗೌಡ ಭವಿಷ್ಯ ನುಡಿ