ಪ್ರವಾಸಕ್ಕೆಂದು ಹೋದ ಸಂದರ್ಭದಲ್ಲಿ ಇಬ್ಬರು ಜಲಸಮಾಧಿಯಾದ ಘಟನೆ ಮಂಚನಬೆಲೆಯ ಡ್ಯಾಂ ಬಳಿ ಸೋಮವಾರ ಸಂಭವಿಸಿದೆ.
ಚಾಮರಾಜನಗರದ ಜೋಸೆಫ್ ಹಾಗೂ ವಿಜಯನಗರದ ಶ್ರೀನಿವಾಸ್ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಇವರು ಐಸಿಐಸಿಐ ಬ್ಯಾಂಕ್ ಸಿಬ್ಬಂದಿಯಾಗಿದ್ದು, ಅವರನ್ನು ರಕ್ಷಿಸಲು ಸ್ನೇಹಿತರು ಪ್ರಯತ್ನಪಟ್ಟರಾದರೂ ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.
ನಾಲ್ಕು ಜನ ಸ್ನೇಹಿತರೊಂದಿಗೆ ಡ್ಯಾಂನಲ್ಲಿ ನಡೆದುಕೊಂಡು ಹೋಗುವಾಗ ಈ ದುರ್ಘಟನೆ ಸಂಭವಿಸಿದೆ. ಉಳಿದವರು ನೀರಿನ ಸೆಳೆತವನ್ನರಿತು ವಾಪಾಸು ಬಂದರೂ ಜೋಸೆಫ್ ಮತ್ತು ಶ್ರೀನಿವಾಸ್ ಅಲ್ಲೇ ಸಿಲುಕಿ ನೀರು ಪಾಲಾದರು ಎಂದು ತಿಳಿದು ಬಂದಿದೆ.
ಮೃತಪಟ್ಟವರ ಶವಕ್ಕಾಗಿ ತೀವ್ರ ಶೋಧ ಕಾರ್ಯ ನಡೆಸಲಾಗುತ್ತಿದೆ. ಪ್ರಕರಣವನ್ನು ಸ್ಥಳೀಯ ಪೊಲೀಸರು ದಾಖಲಿಸಿಕೊಂಡಿದ್ದು, ವಿಚಾರಣೆಯನ್ನು ಮುಂದುವರೆಸಿದ್ದಾರೆ.
|