ಪೊಲೀಸರ ಕಿರುಕುಳ ತಾಳಲಾರದೆ ನಗರದ ವಕೀಲನೊಬ್ಬ ಸೋಮವಾರ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಕೋರ್ಟ್ ಹಾಲ್ ಮುಂಭಾಗದಲ್ಲಿ ವಿಷ ಸೇವನೆ ಮಾಡಿರುವ ಘಟನೆ ನಡೆದಿದೆ. ಬೆಳಿಗ್ಗೆ ವಸಂತಕುಮಾರ್ ಎಂಬ ವಕೀಲ ಹೈಕೋರ್ಟ್ ಹಾಲ್ ಸಂಖ್ಯೆ ಒಂದರ ಮುಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ.
ಮುಖ್ಯ ನ್ಯಾಯಮೂರ್ತಿಗಳ ಕೋರ್ಟ್ ಹಾಲ್ ಮುಂಭಾಗದಲ್ಲಿ ವಿಷ ಕುಡಿದು ಬಳಿಕ ತನ್ನ ಜೇಬಿನಲ್ಲಿಟ್ಟಿದ್ದ ಪತ್ರವೊಂದನ್ನು ತೆಗೆದು ಮುಖ್ಯ ನ್ಯಾಯಾಮೂರ್ತಿಗಳಿಗೆ ನೀಡುವಂತೆ ಅಲ್ಲಿದ್ದವರಲ್ಲಿ ಬೇಡಿಕೊಂಡ. ತಕ್ಷಣವೇ ಅಲ್ಲಿದ್ದವರು ಆತನನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದರು.
ವಕೀಲ ವಸಂತಕುಮಾರ್ ಬರೆದಿದ್ದ 2 ಪುಟಗಳ ಪತ್ರದಲ್ಲಿ, ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತನಗೆ ಹಾಗೂ ತನ್ನ ತಾಯಿಗೆ ಪೊಲೀಸರು ಅನಗತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಬರೆದಿದ್ದಾನೆ ಎಂದು ತಿಳಿದು ಬಂದಿದೆ.
|