ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಬಂಡಾಯ ಸಾಹಿತಿ ಚಂದ್ರಶೇಖರ ಪಾಟೀಲರು ಹೊಸ ಪಕ್ಷ ಸ್ಥಾಪಿಸಲು ಹೊರಟಿರುವುದಕ್ಕೆ ಕನ್ನಡ ಸಾಹಿತ್ಯ ಲೋಕದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪನವರು ನೀಡಿರುವ ಪ್ರತಿಕ್ರಿಯೆಯಲ್ಲಿ, ಚಂಪಾರ ನಿರ್ಧಾರಕ್ಕೆ ನನ್ನ ಆಕ್ಷೇಪಗಳೇನೂ ಇಲ್ಲ. ಏಕೆಂದರೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿರುವವರು ರಾಜಕೀಯಕ್ಕೆ ಇಳಿಯಬಾರದು ಎಂಬ ನಿಯಮವೇನೂ ಇಲ್ಲ, ಅಲ್ಲದೆ ಅವರ ಪಕ್ಷ ಕನ್ನಡಕ್ಕೆ ಸಂಬಂಧಿಸಿರುವುದಾದುದರಿಂದ ಅದಕ್ಕೇಕೆ ವಿರೋಧಿಸಬೇಕು ಎಂದಿದ್ದಾರೆ.
ಇದಕ್ಕೆ ಕೊಂಚ ವಿಭಿನ್ನವಾದ ಅಭಿಪ್ರಾಯ ವ್ಯಕ್ತವಾಗಿದ್ದು ಖ್ಯಾತ ಸಂಶೋಧಕ ಡಾ| ಎಂ.ಚಿದಾನಂದ ಮೂರ್ತಿಯವರಿಂದ. ಸಾಹಿತ್ಯ ಪರಿಷತ್ತಿನ ಅಧ್ಯಕ್ಷಗಿರಿಯಿರುವಾಗಲೇ, ಅದೂ ಪರಿಷತ್ ಸಭಾಂಗಣದಲ್ಲಿ ಈ ಘೋಷಣೆಯನ್ನು ಅವರು ಮಾಡಬಾರದಿತ್ತು. ಇದನ್ನು ತಾನು ಪ್ರಬಲವಾಗಿ ವಿರೋಧಿಸುತ್ತೇನೆ ಎಂದರವರು.
ಹೆಸರು ಹೇಳಲು ಬಯಸದ ಪತ್ರಕರ್ತ-ಸಾಹಿತಿಯೊಬ್ಬರು ಈ ಕುರಿತು ಮಾತನಾಡುತ್ತಾ, ಸಾಹಿತ್ಯ ಪರಿಷತ್‌ನೊಂದಿಗೆ ರಾಜಕೀಯ ಸೇರಬಾರದು. ಬುದ್ಧಿವಂತರು ರಾಜಕೀಯಕ್ಕೆ ಬಂದು ಹದಗೆಟ್ಟಿರುವ ಪರಿಸ್ಥಿತಿಯನ್ನು ಸರಿಪಡಿಸಬೇಕೆಂಬುದೇನೋ ನಿಜ. ಅದರೆ ಅದಕ್ಕೆ ಕಾಲ ಪಕ್ವವಾಗಿಲ್ಲ ಎಂದು ನುಡಿದರು.
|