ರಾಜಭವನ ಕಾಂಗ್ರೆಸ್ ಭವನವಾಗಿ ಮಾರ್ಪಟ್ಟಿದ್ದು, ಇದನ್ನು ವರ್ಗಾವಣೆ ದಂಧೆಯ ಅಡ್ಡೆ ಎಂದು ಕರೆಯುವುದು ಹೆಚ್ಚು ಸೂಕ್ತವಾಗಿದೆ ಎಂದು ಮಾಜಿ ಸಚಿವ ಆರ್.ಅಶೋಕ್ ಕುಹಕವಾಡಿದ್ದಾರೆ.
ಬಿಇಎಲ್ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನಾ ರಾಲಿಯಲ್ಲಿ ಮಾತನಾಡುತ್ತಿದ್ದ ಅವರು, ರಾಜ್ಯಪಾಲರ ಆಡಳಿತ ಪ್ರಾರಂಭವಾದಾಗಿನಿಂದ ರಾಜ್ಯದಲ್ಲಿ ಅರಾಜಕತೆ ಕಂಡುಬಂದಿದೆ. ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಕಾಂಗ್ರೆಸ್ ಕೈಗೊಂಬೆಯಂತೆ ವರ್ತಿಸುತ್ತಿರುವ ರಾಜ್ಯಪಾಲರು ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್‌ಗೆ ಸಹಾಯ ಮಾಡುತ್ತಿದ್ದು ಪ್ರಜೆಗಳನ್ನು ಮರೆತಿದ್ದಾರೆ ಎಂದು ಆಪಾದಿಸಿದರು.
ಅಭಿವೃದ್ಧಿ ಕಾರ್ಯಗಳ ಪರೀಶೀಲನೆ ನಡೆಸುವ ದೃಷ್ಟಿಯಿಂದ ಕನಿಷ್ಟ ವಾರಕ್ಕೊಮ್ಮೆ ಜಿಲ್ಲಾಧಿಕಾರಿಗಳ ಮತ್ತು ಮುಖ್ಯ ಕಾರ್ಯದರ್ಶಿಗಳ ಸಭೆ ನಡೆಸಬೇಕಿದ್ದ ರಾಜ್ಯಪಾಲರು ಈವರೆಗೆ ಯಾವುದೇ ಸಭೆ ನಡೆಸಿಲ್ಲ ಎಂದು ಅಶೋಕ್ ಬೆಟ್ಟು ಮಾಡಿದರು.
ಕಾಂಗ್ರೆಸಿಗರನ್ನು ಓಲೈಸುವುದು ಬಿಟ್ಟು ರಾಜ್ಯಪಾಲರು ಜನರ ಆಶೋತ್ತರಗಳ ಬಗ್ಗೆ ಗಮನ ಹರಿಸಬೇಕು ಹಾಗೂ ಶೀಘ್ರ ಚುನಾವಣೆಗೆ ಶಿಫಾರಸು ಮಾಡಬೇಕು ಎಂದು ಅಶೋಕ್ ಈ ಸಂದರ್ಭದಲ್ಲಿ ಆಗ್ರಹಿಸಿದರು.
|