ರಾಜ್ಯ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ಕೈಗೊಳ್ಳುತ್ತಿರುವ ಕೆಲವು ಕಾರ್ಯಕ್ರಮಗಳು ಸ್ವತಃ ಕಾಂಗ್ರೆಸ್ ಪಕ್ಷದ ಅಸಮಾಧಾನಕ್ಕೆ ಗುರಿಯಾಗಿದ್ದು, ಅವರನ್ನು ಹಿಂದಕ್ಕೆ ಕರೆಸಿಕೊಳ್ಳುವ ಆಲೋಚನೆಗಳು ನಡೆಯುತ್ತಿವೆ ಎಂಬ ವದಂತಿಗಳು ರಾಜಕೀಯ ವಲಯದಲ್ಲಿ ಹಬ್ಬಿವೆ.
ರಾಜ್ಯಪಾಲರ ಕಾರ್ಯವೈಖರಿ ಕಾಂಗ್ರೆಸ್ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದು, ಠಾಕೂರ್ ಬದಲಾಗಿ ಆಂಧ್ರಪ್ರದೇಶದ ವಿಧಾನಸಭೆಯ ಉಪಾಧ್ಯಕ್ಷೆಯಾಗಿರುವ ಕುತೂಹಲಮ್ಮ ಅವರನ್ನು ನೇಮಕ ಮಾಡುವ ಬಗ್ಗೆ ಮಾತುಗಳು ಕೇಳಿ ಬರುತ್ತಿದೆ.
ಕಾಂಗ್ರೆಸ್ ಸಲಹೆಯಂತೆ ಠಾಕೂರ್ ಆಡಳಿತ ನಡೆಸುತ್ತಿದ್ದಾರೆ ಎಂದು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ತರಾಟೆಗೆ ತೆಗೆದುಕೊಂಡಿದ್ದವು. ಅಲ್ಲದೆ, ಜನತಾದರ್ಶನದ ಹೊರತಾಗಿ ರಾಜ್ಯವ್ಯಾಪಿ ಪ್ರವಾಸ ಮಾಡಿ, ಜನರ ಕಷ್ಟಸುಖಗಳಿಗೆ ಸ್ಪಂದಿಸುತ್ತಿಲ್ಲ ಎಂಬ ದೂರು ಕಾಂಗ್ರೆಸ್‌ನಿಂದಲೇ ಕೇಳಿ ಬಂದಿದೆ. ಈ ನಿಟ್ಟಿನಲ್ಲಿ ರಾಜ್ಯಪಾಲರ ಬದಲಾವಣೆಗೆ ರಾಜ್ಯದಲ್ಲಿನ ಪಕ್ಷಗಳು ಆಗ್ರಹಿಸಿವೆ ಎಂದು ತಿಳಿದು ಬಂದಿದೆ.
ಆದರೆ ರಾಜ್ಯದಲ್ಲಿ ಚುನಾಯಿತ ಸರಕಾರ ಇಲ್ಲದಿರುವುದರಿಂದ ರಾಜ್ಯಪಾಲರ ಬದಲಾವಣೆ ಇನ್ನು ವಿಳಂಬವಾಗುವ ಸಾಧ್ಯತೆಗಳಿವೆ. ಅಲ್ಲದೆ, ಕೇಂದ್ರ ಸರಕಾರದ ಬಜೆಟ್ ಮಂಡನೆಯ ಬಳಿಕ ರಾಜ್ಯ ಬಜೆಟ್ ಮಂಡನೆಯಾಗಲಿದೆ. ಬಜೆಟ್ ಅಂಗೀಕಾರದ ತನಕ ಬದಲಾವಣೆ ಸಾಧ್ಯವಿಲ್ಲ ಎಂದು ತಿಳಿದು ಬಂದಿದೆ.
|