ಜನಜಾಗೃತಿ ಕಾರ್ಯಕ್ರಮ ರೂಪಿಸುವ ನಿಟ್ಟಿನಲ್ಲಿ ರಾಜ್ಯ ಬಿಜೆಪಿಯ ಕಾರ್ಯಕಾರಿ ಸಮಿತಿ ಸಭೆ ಗುರುವಾರ ನಗರದ ವುಡ್ಲ್ಯಾಂಡ್ ಹೊಟೇಲ್‌ನಲ್ಲಿ ನಡೆಯಲಿದ್ದು, ಇದರಲ್ಲಿ ಬಿಜೆಪಿ ಕಾರ್ಯಕಾರಿ ಸದಸ್ಯರು, ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಭಾಗವಹಿಸಲಿದ್ದಾರೆ.
ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾದ ಬಳಿಕ ರಾಜ್ಯಪಾಲರು ನಡೆಸುತ್ತಿರುವ ಅಧಿಕಾರ, ಹಿಂದಿನ ಬಜೆಟ್ ಅನುಷ್ಠಾನದಲ್ಲಿ ಆಗಿರುವ ವಿಳಂಬ ಸೇರಿದಂತೆ ಹಲವು ಚರ್ಚೆ ನಡೆಸುವ ನಿಟ್ಟಿನಲ್ಲಿ ಈ ಸಭೆ ಕರೆಯಲಾಗಿದೆ.
ಬಿಜೆಪಿ ರಾಜ್ಯ ಉಸ್ತುವಾರಿ ವಹಿಸಿರುವ ಯಶವಂತಾ ಸಿನ್ಹಾ ಸಭೆಯ ನೇತೃತ್ವ ವಹಿಸಲಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದ ಅನಂತಕುಮಾರ್, ರಾಜ್ಯಾಧ್ಯಕ್ಷ ಡಿ.ವಿ. ಸದಾನಂದ ಗೌಡ ಸೇರಿದಂತೆ ಬಿಜೆಪಿಯ ಹಲವು ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಅಲ್ಲದೆ, ಸಭೆಯಲ್ಲಿ ಚುನಾವಣಾ ಕಾರ್ಯತಂತ್ರ ಹಾಗೂ ಮೇ 20ರೊಳಗೆ ಜನಾದೇಶ ಪಡೆಯುವ ನಿಟ್ಟಿನಲ್ಲಿ ಒತ್ತಡ ಹೇರುವ ಕುರಿತು ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಕಾರ್ಯಕಾರಿ ಸಭೆಯ ಬಳಿಕ ರಾಜ್ಯ ಪದಾಧಿಕಾರಿಗಳ ಸಭೆಯೂ ನಡೆಯಲಿದ್ದು, ಕೇಂದ್ರ ಸರಕಾರದ ವಿರುದ್ಧ ಹೋರಾಟ ನಡೆಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಿದೆ ಎಂದು ತಿಳಿದು ಬಂದಿದೆ.
|