ಯಾವ ಪಕ್ಷಕ್ಕೂ ಬಹುಮತ ಲಭಿಸದೆ ಅತಂತ್ರ ಸ್ಥಿತಿಯಲ್ಲಿದ್ದ ರಾಯಚೂರು ನಗರಸಭಾ ಚುನಾವಣೆಯಲ್ಲಿ ಬಿಜೆಪಿಗೆ ಜೆಡಿಎಸ್ ಪಕ್ಷವು ಬಾಹ್ಯ ಬೆಂಬಲ ನೀಡುವುದರ ಮೂಲಕ ಎಲ್ಲರನ್ನು ಅಚ್ಚರಿಯಲ್ಲಿ ಕೆಡವಿದೆ.
ನಗರಸಭೆಯ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು. 19 ಸ್ಥಾನ ಗಳಿಸಿದ ಪಕ್ಷಕ್ಕೆ ಅಧಿಕಾರ ಪ್ರಾಪ್ತವಾಗುವಂಥ ಸನ್ನಿವೇಶ ನಿರ್ಮಾಣವಾಗಿತ್ತು. 15 ಸ್ಥಾನ ಗಳಿಸಿದ್ದ ಕಾಂಗ್ರೆಸ್ ಕೂಡಾ ಬಿಜೆಪಿಯ ಬೆಂಬಲ ಪಡೆಯಲು ತೆರೆಮರೆಯ ಪ್ರಯತ್ನ ನಡೆಸಿತ್ತು ಎನ್ನಲಾಗಿದೆ.
ಆದರೆ ಇದರ ಮುನ್ಸೂಚನೆ ಪಡೆದ ಜೆಡಿಎಸ್ ಕ್ಷಿಪ್ರ ಬೆಳವಣಿಗೆಯೊಂದರಲ್ಲಿ ಬಿಜೆಪಿಗೆ ಬಾಹ್ಯ ಬೆಂಬಲ ನೀಡುವ ನಿರ್ಧಾರವನ್ನು ಕೈಗೊಂಡಿದೆ. ಇದರ ಹಿಂದೆ ಏನು ಒಪ್ಪಂದವಾಗಿದೆ ಎಂದು ತಕ್ಷಣಕ್ಕೆ ತಿಳಿದುಬಂದಿಲ್ಲ. ಈಗಿನ ಮೀಸಲು ಪದ್ಧತಿ ಅನುಸಾರ ನಗರ ಸಭೆಯ ಅಧ್ಯಕ್ಷಗಿರಿ ಬಿಸಿಎ ವರ್ಗಕ್ಕೆ ಸಿಕ್ಕರೆ ಉಪಾಧ್ಯಕ್ಷಗಿರಿ ಸಾಮಾನ್ಯ ವರ್ಗಕ್ಕೆ ಸಿಗಲಿದೆ.
ಆದರೆ ಇದಕ್ಕೆ ರಾಯಚೂರಿನ ಕೆಲ ಸಾರ್ವಜನಿಕರು ಬೇರೆಯದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ತಾವು ಮಾಡಿರುವ ಭ್ರಷ್ಟಾಚಾರವನ್ನು ಮುಚ್ಚಿಹಾಕಲೆಂದೇ ಜೆಡಿಎಸ್ ಈರೀತಿಯ ಬೆಂಬಲ ನೀಡಿದೆ ಎಂಬುದು ಅವರ ಆರೋಪ ಎಂದು ಸುದ್ದಿಮೂಲಗಳು ತಿಳಿಸಿವೆ.
|