ಇಂದಿರಾನಗರದ ಕೊರಿಯರ್ ಸಂಸ್ಥೆಯ ಕಚೇರಿಯೊಂದರಲ್ಲಿ ಐದು ನಾಡಬಾಂಬ್‌ಗಳು ಪತ್ತೆಯಾಗಿದ್ದು ಭೀತಿಯ ವಾತವರಣ ಮೂಡಿಸಿವೆ.
ಇಲ್ಲಿನ ಡಬಲ್ ರೋಡ್‌ನಲ್ಲಿರುವ ಕೊರಿಯರ್ ಸಂಸ್ಥೆಯಲ್ಲಿ ಬಾಂಬ್ ಇಡಲಾಗಿದೆ ಎಂದು ಫೋನ್ ಕರೆ ಬಂದ ಕೂಡಲೇ ಕಾರ್ಯಪ್ರವೃತ್ತರಾದ ಇಂದಿರಾನಗರ ಪೊಲೀಸರು ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳದೊಂದಿಗೆ ಸ್ಥಳಕ್ಕೆ ತೆರಳಿ ಬಾಂಬ್‌ಗಳನ್ನು ವಶಪಡಿಸಿಕೊಂಡು ನಾಶಪಡಿಸಿದ್ದಾರೆ. ಇದರಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಗನ್‌ಪೌಡರನ್ನು ಕಲ್ಲಿನ ಮಧ್ಯೆ ಸೇರಿಸಿ ಬಟ್ಟೆಯಲ್ಲಿ ಸುತ್ತಿ ಅದರ ಮೇಲೆ ನೆರೆ ರಾಜ್ಯದ ಭಾಷೆಯ ಪತ್ರಿಕೆಯನ್ನು ಸುತ್ತಿ ಬಾಂಬ್ ತಯಾರಿಸಲಾಗಿದ್ದು ಅವು ಪತ್ತೆಯಾದ ಕೂಡಲೇ ಪೊಲೀಸರು ನೀರಿನಲ್ಲಿ ಅದ್ದಿ ಅವನ್ನು ನಿಷ್ಕ್ರಿಯಗೊಳಿಸಿದ್ದಾರೆ. ಶಿವಾಜಿನಗರದ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಬೂತ್‌ನಿಂದ ಕರೆ ಬಂದಿರುವುದು ಖಚಿತವಾಗಿದೆ. ಆದರೆ ಕರೆ ಮಾಡಿದವರಾರು ಎಂದು ಪತ್ತೆಯಾಗಿಲ್ಲ.
ಇದಕ್ಕೆ ಸಂಬಂಧಿಸಿ ಕೊರಿಯರ್ ಸಂಸ್ಥೆಯ ಉದ್ಯೋಗಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆದರೆ ಅವರಿಂದ ಯಾವುದೇ ಮಾಹಿತಿ ದೊರೆತಿಲ್ಲ. ಕೊರಿಯರ್ ಸಂಸ್ಥೆಗೆ ನಾಡಬಾಂಬ್ ಹೇಗೆ ಬಂದವು ಎಂಬ ಪ್ರಶ್ನೆ ಪೊಲೀಸರನ್ನು ಕಾಡುತ್ತಿದೆ. ಈ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
|