ರಾಜ್ಯಪಾಲ ರಾಮೇಶ್ವರ ಠಾಕೂರ್ ಎತ್ತಂಗಡಿ ಕುರಿತ ಸುದ್ದಿಗಳನ್ನು ಅಲ್ಲಗಳೆದಿರುವಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಇದು ಬರಿಯ ವದಂತಿ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ರಾಜ್ಯಪಾಲರ ವರ್ಗಾವಣೆ ಅಧಿಕಾರ ನಮಗಿಲ್ಲ. ಕೇಂದ್ರವೇ ಪರಾಮರ್ಶಿಸಿ ಈ ಬಗ್ಗೆ ನಿರ್ಧಾರ ಕೈಗೊಳ್ಳಬಹುದು. ಆದರೆ ದ್ವಂದ್ವ ಹೇಳಿಕೆಯ ಮೂಲಕ ರಾಜ್ಯಪಾಲರನ್ನು ಬ್ಲಾಕ್ಮೇಲ್ ಮಾಡಲು ಯತ್ನಿಸುತ್ತಿರುವ ಬಿಜೆಪಿ ಈ ಬಗೆಯ ವದಂತಿಗಳನ್ನು ಹರಡುತ್ತಿದೆ ಎಂದು ಆಪಾದಿಸಿದರು.
ಜೆಡಿಎಸ್‌ನೊಂದಿಗೆ ಬಿಜೆಪಿ ಸಮ್ಮಿಶ್ರ ಸರಕಾರ ನಡೆಸುತ್ತಿದ್ದಾಗ ಆಯಕಟ್ಟಿನ ಸ್ಥಳಗಳಲ್ಲಿ ನೆಲೆಯೂರಿದ್ದ ಅಧಿಕಾರಿಗಳನ್ನು ಮುಂದುವರೆಸಿ ತಮ್ಮ ಕೆಲಸ ಸಾಧಿಸಿಕೊಳ್ಳುವ ಹುನ್ನಾರ ಬಿಜೆಪಿಯದು. ಈ ದೃಷ್ಟಿಯಿಂದ ಬ್ಲಾಕ್ಮೇಲ್ ತಂತ್ರದ ಮೂಲಕ ರಾಜ್ಯಪಾಲರ ಮೇಲೆ ಆರೋಪ ಮಾಡುತ್ತಿದೆ ಎಂದು ಖರ್ಗೆ ದೂರಿದರು.
ಜನರ ಕಲ್ಯಾಣಕ್ಕಿಂತಲೂ ಖಾತೆ ಹಂಚಿಕೆಗೆ ಸಂಬಂಧಿಸಿದಂತೆಯೇ ಕಿತ್ತಾಟ ನಡೆಸಿದ ಬಿಜೆಪಿ-ಜೆಡಿಎಸ್ ಪಕ್ಷಗಳು ಕೊನೆಗೆ ರಾಷ್ಟ್ರಪತಿ ಆಡಳಿತ ಹೇರುವಂತಾಗಲು ಕಾರಣವಾದವು. ಇದಕ್ಕೆ ಈ ಎರಡೂ ಪಕ್ಷಗಳ ಸ್ವಾರ್ಥವೇ ಕಾರಣ ಎಂದು ಖರ್ಗೆ ನುಡಿದರು.
|