ಕೇಂದ್ರ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಅವರು ಕನ್ನಡಿಗರನ್ನು ಕೊಳಕರು ಎಂದು ಜರೆದಿರುವ ವಿರುದ್ಧ ಪ್ರತಿಭಟನೆ ಮುಂದುವರಿದಿದ್ದು, ಲಾಲೂ ಹೇಳಿಕೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಗುರುವಾರ ದಂಡು ರೈಲ್ವೆ ನಿಲ್ದಾಣಕ್ಕೆ ತೆರಳಿ ದಾಂಧಲೆ ನಡೆಸಿದ್ದಾರೆ.
ಬೆಳಿಗ್ಗೆ ದಂಡು ರೈಲ್ವೆ ನಿಲ್ದಾಣದ ಕಚೇರಿಗೆ ನುಗ್ಗಿದ ಕರವೇ ಕಾರ್ಯಕರ್ತರು ಅಲ್ಲಿದ್ದ ಪಿಠೋಪಕರಣಗಳನ್ನು ಕೆಡವಿ ಧ್ವಂಸ ಮಾಡಿದರು. ದಾಂಧಲೆ ನಡೆಸಿದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತಗೆದುಕೊಂಡಿದ್ದಾರೆ.
ಕಳೆದ ಎರಡು ದಿನಗಳಿಂದ ಕರವೇ ಕಾರ್ಯಕರ್ತರು ಲಾಲೂ ವಿರುದ್ಧ ಕಿಡಿಕಾರಿದ್ದು, ರೈಲ್ವೆ ನಿಲ್ದಾಣದಲ್ಲಿ ಪಿಠೋಪಕರಣಗಳನ್ನು ಧ್ವಂಸ ಮಾಡಿರುವ ಹಿನ್ನೆಲೆಯಲ್ಲಿ ದಂಡು ರೈಲ್ವೆ ನಿಲ್ದಾಣಕ್ಕೂ ಬಿಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿತ್ತು. ಆದರೆ ಪ್ರಯಾಣಿಕರ ಸರದಿಯಲ್ಲಿ ನಿಂತು ಒಳಗೆ ನುಸುಳಿದ ಕಾರ್ಯಕರ್ತರು ಏಕಾಏಕಿ ಟಿಕೆಟ್ ಕೌಂಟರ್ ಹಾಗೂ ರಿಸರ್ವೇಶನ್ ಕೌಂಟರ್ ಮೇಲೆ ದಾಳಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾದರೂ ಇದರಿಂದ ಕಂಪ್ಯೂಟರ್ ಸೇರಿದಂತೆ ಹಲವು ಪಿಠೋಪಕರಣ ಸಾಮಗ್ರಿಗಳು ಧ್ವಂಸಗೊಂಡಿದೆ. ಅಲ್ಲದೆ, ಈ ಘಟನೆಯಿಂದ ದೂರದ ಊರಿಗೆ ಹೋಗುವ ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದಾರೆ.
|