ಅಕ್ರಮವಾಗಿ ಮರ ಸಾಗಾಟಕರ ವಿರುದ್ಧ ದಾಳಿ ನಡೆಸಿದ ಅರಣ್ಯ ಇಲಾಖೆ ಗುಂಡಿನ ದಾಳಿ ನಡೆಸಿದ ಪರಿಣಾಮ ಕಳ್ಳಸಾಗಾಣಿಕೆದಾರನೊಬ್ಬ ಮೃತಪಟ್ಟ ಘಟನೆ ಶಿಕಾರಿ ಪುರದ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಶಿಕಾರಿಪುರದ ಅರಣ್ಯ ಪ್ರದೇಶದಲ್ಲಿ ನಡೆದ ಈ ಘಟನೆಯಲ್ಲಿ ಕಲ್ಮನೆ ಗ್ರಾಮದ ರಾಜಪ್ಪ ಮೃತಪಟ್ಟದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದ್ದು, ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಬೀಟಿ ಮರಗಳ್ಳರ ಬಗ್ಗೆ ಸಿಕ್ಕಿದ ಸುಳಿವಿನ ಆಧಾರದ ಮೇಲೆ ಅರಣ್ಯ ಇಲಾಖೆ ಮಿಂಚಿನ ದಾಳಿ ನಡೆಸಿತು. ಆ ಸಂದರ್ಭದಲ್ಲಿ ಮರಗಳ್ಳರು ತಪ್ಪಿಸುವ ಪ್ರಯತ್ನ ನಡೆಸಿದಾಗ ಇಲಾಖೆ ಗುಂಡು ಹಾರಿಸಿದ್ದು ಈ ಘಟನೆ ಸಂಭವಿಸಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಈ ಘಟನೆಯಿಂದ ರೋಸಿ ಹೋಗಿರುವ ಗ್ರಾಮಸ್ಥರು ಇದನ್ನು ಖಂಡಿಸಿದ್ದು, ಕಳ್ಳರನ್ನು ಎಚ್ಚರಿಸುವ ಬದಲಿಗೆ, ವಿನಾಕಾರಣ ಈ ಕೃತ್ಯ ಎಸಗಲಾಗಿದೆ ಎಂದು ಅರಣ್ಯ ಇಲಾಖಾ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸ್ ತುಕಡಿಯನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ತಿಳಿದು ಬಂದಿದೆ. ಶಿಕಾರಿಪುರದ ದಟ್ಟ ಅರಣ್ಯ ಪ್ರದೇಶದಲ್ಲಿ ಈ ಹಿಂದೆಯೇ ಇಂತಹ ಹಲವಾರು ಅಕ್ರಮ ಮರ ಸಾಗಾಟ ಪ್ರಕರಣಗಳು ಬೆಳಕಿಗೆ ಬಂದಿವೆಯಾದರೂ, ಮೊದಲೇ ಇಂತಹ ಪ್ರಕರಣಗಳಿಗೆ ಸೂಕ್ತವಾದ ಕ್ರಮವನ್ನು ಯಾಕೆ ಕೈಗೊಂಡಿಲ್ಲ ಎಂಬುದಾಗಿ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
|