ಜನಾದೇಶಕ್ಕೋಸ್ಕರ ಜನಾಕ್ರೋಶ ಎಂಬ ಆಂದೋಲನದಡಿ ರಾಜ್ಯದ ಮೂಲೆ ಮೂಲೆಯಲ್ಲಿ ಹೋರಾಟ ನಡೆಸಲು ನಗರದಲ್ಲಿ ಗುರುವಾರ ನಡೆದ ಬಿಜೆಪಿಯ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ವಿಸ್ತರಿಸಬಾರದು ಮತ್ತು ಮೇ 28ರೊಳಗಾಗಿ ವಿಧಾನಸಭಾ ಚುನಾವಣೆಗಳನ್ನು ನಡೆಸಬೇಕು ಎಂಬ ಎರಡು ಅಂಶಗಳನ್ನು ಮುಂದಿಟ್ಟುಕೊಂಡು ಈ ತಿಂಗಳ 27ರಿಂದ ರಸ್ತೆ ತಡೆ ಮತ್ತು ಜೈಲ್‌ಭರೋ ಚಳುವಳಿಗಳನ್ನು ನಡೆಸಲು ಬಿಜೆಪಿ ನಿರ್ಧರಿಸಿದೆ.
ಪಕ್ಷದ ರಾಜ್ಯಾಧ್ಯಕ್ಷ ಸದಾನಂದ ಗೌಡರವರು ಈ ಕುರಿತು ಮಾತನಾಡುತ್ತಾ, ಜೈಲ್‌ಭರೋ ಚಳುವಳಿಗೆ ಪೂರ್ವಭಾವಿಯಾಗಿ ಈ ತಿಂಗಳ 18ರಿಂದ ಪಕ್ಷದ ನಾಯಕರು ವಿಭಾಗವಾರು ಪ್ರವಾಸ ಮಾಡಿ ಕಾರ್ಯಕರ್ತರು ಮತ್ತು ಪಕ್ಷದ ಅಭಿಮಾನಿಗಳನ್ನು ಸನ್ನದ್ಧಗೊಳಿಸುವರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸದ ಅನಂತಕುಮಾರ್ ಮಾತನಾಡುತ್ತಾ, ರಾಷ್ಟ್ರಪತಿ ಆಡಳಿತವನ್ನು ಮುಂದೂಡುವ ವಿಧೇಯಕವನ್ನು ಮುಂಬರುವ ಸಂಸತ್ ಅಧಿವೇಶನದಲ್ಲಿ ಮಂಡಿಸಲು ಕೇಂದ್ರ ಪ್ರಯತ್ನಿಸಿದರೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯರು ತೀವ್ರಹೋರಾಟ ನಡೆಸಲಿದ್ದಾರೆ ಎಂದು ತಿಳಿಸಿದರು.
|