ರಾಜ್ಯದಲ್ಲಿ ತಳವೂರಲು ಯತ್ನಸುತ್ತಿದ್ದ ಉಗ್ರರು ಬೆಳಗಾವಿಯ ನಿಪ್ಪಾಣಿಯಲ್ಲಿ ಬಾಂಬ್ ಸೇರಿದಂತೆ ಸ್ಫೋಟಕ ವಸ್ತುಗಳನ್ನು ತಯಾರಿಸುತ್ತಿದ್ದರು ಎಂಬ ಅಂಶ ತನಿಖೆಯ ವೇಳೆಗೆ ಬೆಳಕಿಗೆ ಬಂದಿದೆ.
ಈ ಸಂಬಂಧ ನಿಪ್ಪಾಣಿಯಲ್ಲಿ ಸಿಓಡಿ ತಂಡ ಹುಡುಕಾಟ ನಡೆಸಿದ ವೇಳೆ ಸುಮಾರು ಆರು ಲೀಟರಿನಷ್ಟು ಬಾಂಬ್ ತಯಾರಿಕಾ ಹೈಡ್ರೋಜನಿಕ್ ರಾಸಾಯನಿಕ ಹಾಗೂ ಇನ್ನಿತರ ವಸ್ತುಗಳು ದೊರೆತಿವೆ.
ದಾವಣಗೆರೆಯಲ್ಲಿ ಬಂಧನಕ್ಕೀಡಾಗಿರುವ ಶಂಕಿತ ಉಗ್ರ ಅಸಾದುಲ್ಲಾನನ್ನು ವಿಚಾರಣೆಗೊಳಪಡಿಸಿದ ವೇಳೆ ಈ ಮಾಹಿತಿ ಬಹಿರಂಗಗೊಂಡಿದೆ. ಈ ಹಿನ್ನೆಲೆಯಲ್ಲಿ ಅಸಾದುಲ್ಲಾನನ್ನು ಸಿಓಡಿ ತೀವ್ರ ತನಿಖೆಗೆ ಒಳಪಡಿಸಿದ್ದು, ಉಗ್ರರು ನೆಲೆಸಿದ್ದ ಕಡೆಗಳಲ್ಲಿ ಆತನೊಡನೆ ಜಿಲ್ಲೆಯಾದ್ಯಂತ ಸಂಚರಿಸಿ ಮಹತ್ವದ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ.
ಈ ಮಧ್ಯೆ, ಇನ್ನೊಬ್ಬ ಉಗ್ರ ಬೆಂಗಳೂರಿನಲ್ಲಿ ವಿಧಾನಸೌಧ, ಇಸ್ರೋ ಸೇರಿದಂತೆ ಹಲವು ಕಡೆಗಳಲ್ಲಿ ಸ್ಫೋಟದ ಸಂಚು ರೂಪಿಸಿರುವುವ ವಿಚಾರವನ್ನು ಮಂಪರು ಪರೀಕ್ಷೆಯಲ್ಲಿ ಬಹಿರಂಗಗೊಳಿಸಿದ್ದಾನೆ. ಈ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ಸ್ಥಳಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
|