ಪ್ರತಿಭಟನೆ ಹೆಸರಿನಲ್ಲಿ ಪುಂಡಾಟಿಕೆ ನಡೆಸುವ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಶಂಕರ ಬಿದರಿ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ಕರ್ನಾಟಕ ರಕ್ಷಣಾ ವೇದಿಕೆ ಮೂರು ರೈಲ್ವೆ ನಿಲ್ದಾಣಗಳ ಮೇಲೆ ದಾಳಿ ಮಾಡಿರುವ ಹಿನ್ನೆಲೆಯಲ್ಲಿ ಬಿದರಿ ಈ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಹಿಂಸಾ ಕೃತ್ಯ ಎಸಗುವುದರಿಂದ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ ಎಂಬ ಭಾವನೆ ಸಾರ್ವಜನಿಕರಲ್ಲಿ ಸೃಷ್ಟಿಯಾಗುವ ಹಿನ್ನೆಲೆಯಲ್ಲಿ ಇಂಥ ಪ್ರಕರಣಗಳು ಮರುಕಳಿಸಿದರೆ ದಾಳಿಕೋರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಪೊಲೀಸ್ ಇಲಾಖೆ ಹಿಂಜರಿಯುವುದಿಲ್ಲ ಎಂದು ಅವರು ಎಚ್ಚರಿಸಿದರು.
ರಾಜ್ಯದಲ್ಲಿ ಏನೇ ತೊಂದರೆಗಳಾದರೂ ಅದನ್ನು ಪ್ರತಿಭಟಿಸುವ ಅಥವಾ ಅಭಿಪ್ರಾಯ ಮಂಡಿಸುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಪ್ರತಿಭಟನೆ ಶಾಂತಿ ರೂಪದಲ್ಲಿದ್ದರೆ ಒಳಿತು, ಅದು ಬಿಟ್ಟು ಅದನ್ನು ಹಿಂಸಾರೂಪವಾಗಿ ಪರಿವರ್ತಿಸಿ ದಾಂಧಲೆ ನಡೆಸುವುದು ಸರಿಯಲ್ಲ ಎಂದವರು ತಿಳಿಸಿದರು.
ಕಾನೂನು ಸುವ್ಯವಸ್ಥೆಗೆ ವಿರುದ್ಧವಾಗಿ ನಡೆದುಕೊಳ್ಳುವವರನ್ನು ತಕ್ಷಣವೇ ಬಂಧಿಸಬೇಕು. ಅಲ್ಲದೆ, ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವವರ ವಿರುದ್ಧ ಪ್ರಕರಣ ದಾಖಲಿಸಿ ಉಗ್ರ ಕ್ರಮ ಕೈಗೊಳ್ಳುವಂತೆ ವರಿಷ್ಠಾಧಿಕಾರಿಗಳಿಗೆ ಹಾಗೂ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಬಿದರಿ ತಿಳಿಸಿದರು.
|