ಕೊಡಗಿನ ಸೋಮವಾರಪೇಟೆ ಸಮೀಪದ ಹಳ್ಳಿಯೊಂದಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸೊಂದು ಜೀಪಿಗೆ ಢಿಕ್ಕಿ ಹೊಡೆದ ಪರಿಣಾಮ ಐವರು ಮೃತಪಟ್ಟು, ಇತರ 10 ಮಂದಿಗೆ ಗಾಯಗೊಂಡಿರುವ ಭೀಕರ ದುರ್ಘಟನೆ ಸಂಭವಿಸಿದೆ.
ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಕಾರ್ಮಿಕರನ್ನು ಕರೆದುಕೊಂಡು ಬರುತ್ತಿದ್ದ ಜೀಪು ರಾಂಗ್‌ಸೈಡಿನಲ್ಲಿ ಬಂದ್ದಿದ್ದರಿಂದ ಸಾರಿಗೆ ಸಂಸ್ಥೆಯ ಬಸ್ಸಿಗೆ ನಿಯಂತ್ರಣ ಸಿಗದಿರುವುದು ಅಫಘಾತಕ್ಕೆ ಕಾರಣವಾಗಿದೆ.
ಅನಾಹುತ ತಪ್ಪಿಸಲು ಬಸ್ಸಿನ ಚಾಲಕನು ಇನ್ನಿಲ್ಲದ ಪ್ರಯತ್ನ ಮಾಡಿ ಬಸ್ಸನ್ನು ಯಾವ ಕಡೆಗೆ ತಿರುಗಿಸಿದರೂ ಜೀಪು ಚಾಲಕನೂ ಅದೇ ಕಡೆಗೆ ಜೀಪನ್ನು ತಿರುಗಿಸುತ್ತಿದ್ದುದರಿಂದ ಅಪಘಾತ ಸಂಭವಿಸಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
ಜೀಪಿನಲ್ಲಿದ್ದ ಐವರಲ್ಲಿ ನಾಲ್ಕುಮಂದಿ ಕಾರ್ಮಿಕರು ಹಾಗೂ ಓರ್ವ ಪೊಲೀಸ್ ಕಾನ್ಸ್ಟೇಬಲ್ ಸಾವನ್ನಪ್ಪಿದ್ದಾರೆ. ಗಾಯಗೊಂಡವರನ್ನು ಸನಿಹದ ಆಸ್ಪತ್ರೆಗೆ ಸೇರಿಸಲಾಗಿದ್ದು, ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
|