ಕ್ಷೇತ್ರ ಪುನರ್ ವಿಂಗಡಣೆ ಜಾರಿಯಾಗುವ ಹಿನ್ನೆಲೆಯಲ್ಲಿ ವಿಧಾನಸಭಾ ಚುನಾವಣೆಗಳೂ ತಡವಾಗಿ ನಡೆಯುವುದರಿಂದ ಮಹಾರಾಷ್ಟ್ರ ರಾಜ್ಯಪಾಲ ಎಸ್.ಎಂ.ಕೃಷ್ಣರವರು ಕರ್ನಾಟಕದ ಸಕ್ರಿಯ ರಾಜಕಾರಣಕ್ಕೆ ಮರಳುವ ಸುದ್ದಿಗಳಿಗೀಗ ರೆಕ್ಕೆಪುಕ್ಕ ಹುಟ್ಟಿಕೊಂಡಿದೆ.
ಈ ಹಿಂದೆ ಕೃಷ್ಣಾಗಮನದ ಸುದ್ದಿ ಪ್ರತಿಬಾರಿ ಹೊರಬಿದ್ದಾಗಲೂ ಅದಕ್ಕೆ ಸ್ವಾಗತ-ವಿರೋಧಗಳು ಸಮಾನ ಪ್ರಮಾಣದಲ್ಲಿ ವ್ಯಕ್ತವಾಗಿದ್ದವು. ಅವರನ್ನು ಬೆಂಬಲಿಸುವ ಒಂದು ಗುಂಪು ಕೆಪಿಸಿಸಿಯಲ್ಲಿ ಇರುವಂತೆಯೇ ವಿರೋಧಿಸುವ ಮತ್ತೊಂದು ಗುಂಪು ಇರುವುದೇ ಇದಕ್ಕೆ ಕಾರಣ.
ಆದರೆ ಒಳಜಗಳಗಳನ್ನು ಬಿಟ್ಟು ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳು ಅನುಷ್ಠಾನಗೊಳ್ಳಬೇಕು ಎಂಬ ಗುಪ್ತ ಸಂದೇಶ ಹೈಕಮಾಂಡ್‌ನಿಂದ ರವಾನೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಮುಖಂಡರೆಲ್ಲಾ ಭಿನ್ನಾಭಿಪ್ರಾಯವನ್ನು ಒಳಗೊಳಗೇ ನುಂಗಿಕೊಂಡು ಕೃಷ್ಣರನ್ನು ಸ್ವಾಗತಿಸಲು ವೇದಿಕೆ ಸಿದ್ಧಮಾಡಿಕೊಳ್ಳಬೇಕಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಅಧಿಕಾರ ಹಸ್ತಾಂತರ ವಿವಾದಕ್ಕೆ ಸಂಬಂಧಿಸಿ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿಸಿಕೊಂಡಿರುವುದರಿಂದ ಸಹಜವಾಗಿಯೇ ಆ ಪಕ್ಷಗಳ ಸ್ಥಿರತೆಯ ಬಗ್ಗೆ ಜನರಲ್ಲಿ ನಂಬಿಕೆ ಹೊರಟುಹೋಗಿದೆ. ಸ್ಥಿರ ಸರ್ಕಾರ ನೀಡಬಲ್ಲ ಪಕ್ಷದ ಕಡೆಗೆ ಜನ ಒಲವು ತೋರಿಸುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಕ್ಷೇತ್ರ ಪುನರ್ ವಿಂಗಡಣೆಯ ವಿಷಯ ವರದಾನವಾಗಲಿದೆ.
ಈಗ ಚುನಾವಣೆಗೆ ನವೆಂಬರ್ ತನಕ ಅವಕಾಶವಿರುವುದರಿಂದ ಇದನ್ನು ಸದುಪಯೋಗಪಡಿಸಿಕೊಂಡು ಪಕ್ಷದ ಇಮೇಜ್ ವರ್ಧಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ದೆಹಲಿಯಿಂದ ಆದೇಶ ಬಂದಿದ್ದು ಅದರ ಒಂದು ಭಾಗವೇ ಕೃಷ್ಣರ ಪುನರಾಗಮನ ಎನ್ನಲಾಗಿದೆ.
|