ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬಂದಮೇಲೆ ಸಕ್ರಿಯ ಆಡಳಿತ ನಡೆಸುತ್ತಿರುವ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರ ಜನತಾದರ್ಶನ ಕಾರ್ಯಕ್ರಮಕ್ಕೆ ಈಗ ಎಲ್ಲಿಲ್ಲದ ಜನಪ್ರಿಯತೆ ಸಿಕ್ಕಿದೆ.
ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವವರು, ರೋಗಿಗಳು, ಅಂಗವಿಕಲರೂ ಸೇರಿದಂತೆ, ಅಧಿಕಾರಿಗಳಿಂದ ಕಿರುಕುಳ ಎದುರಿಸುತ್ತಿರುವವರು, ಭೂವಿವಾದದ ಸಮಸ್ಯೆಗಳನ್ನೆದುರಿಸುತ್ತಿರುವವರೂ ಈ ಜನತಾದರ್ಶನದ ಸರದಿ ಸಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.
ಈ ಹಿಂದೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಡೆಸುತ್ತಿದ್ದ ಜನತಾ ದರ್ಶನದಲ್ಲಿ ಅಹವಾಲುಗಳನ್ನು ಸ್ವೀಕರಿಸಿ ಅಲ್ಲೇ ಇದ್ದ ಅಧಿಕಾರಿಗಳಿಗೋ ಅಥವಾ ಆಪ್ತ ಸಹಾಯಕರಿಗೋ ನೀಡಲಾಗುತ್ತಿತ್ತು. ಇದು ಅಧಿಕೃತವಾಗಿ ದಾಖಲಾಗುತ್ತಿರಲಿಲ್ಲ.
ಆದರೆ ಈಗಿನದು ಪಕ್ಕಾ ಹದಿನಾರಾಣೆ ವ್ಯವಸ್ಥಿತ ಜನತಾ ದರ್ಶನ. ಪ್ರತಿಯೊಬ್ಬರಿಂದ ಅರ್ಜಿ-ಅಹವಾಲನ್ನು ಸ್ವೀಕರಿಸಿದ ಮೇಲೆ ಅದನ್ನು ಕಂಪ್ಯೂಟರಿನಲ್ಲಿ ಫೀಡ್ ಮಾಡಿ, ಸ್ವೀಕೃತಿ ಪತ್ರವನ್ನೂ ನೀಡಲಾಗುತ್ತಿದೆ. ಅಷ್ಟೇ ಅಲ್ಲ ವಿಭಾಗವಾರು ಕೌಂಟರ್‌ಗಳನ್ನು ತೆರೆಯಲಾಗಿದ್ದು ಸಮಸ್ಯೆಗಳನ್ನು ಸೂಕ್ತ ರೀತಿಯಲ್ಲಿ ವರ್ಗೀಕರಿಸಲು ಇದರಿಂದ ಸಹಾಯವಾಗುತ್ತಿದೆ.
ನೊಂದ ಮನಸ್ಸಿಗೆ ಸಾಂತ್ವನ ಹಾಗೂ ಭರವಸೆ ಸಿಗುತ್ತಿರುವುದರಿಂದ ಈ ಹಿಂದೆ ಒಮ್ಮೆ ಜನತಾದರ್ಶನಕ್ಕೆ ಬಂದವರೂ ಮತ್ತೆ ಮತ್ತೆ ಬರುತ್ತಿರುವುದು ರಾಜ್ಯಪಾಲರ ಜನತಾ ದರ್ಶನಕ್ಕೆ ಸ್ಟಾರ್ ಇಮೇಜು ನೀಡಿದೆ.
|