ರಾಜ್ಯದಲ್ಲಿ ಇತ್ತೀಚೆಗೆ ಬಂಧನಕ್ಕೀಡಾಗಿರುವ ಶಂಕಿತ ಉಗ್ರರ ವಿಚಾರಣೆಗೆ ಕಾಂಗ್ರೆಸ್ ಅಡ್ಡಿಯಾಗುತ್ತಿದೆ ಎಂದು ಬಿಜೆಪಿ ದೂರಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದದ್ದ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಸುರೇಶ್ ಕುಮಾರ್ ಅವರು ತನಿಖೆಯಲ್ಲಿ ಕೆಲ ಕಾಂಗ್ರೆಸ್ ಮುಖಂಡರು ಹಸ್ತಕ್ಷೇಪ ಮಾಡುತ್ತಿರುವ ವಿಚಾರ ಆಘಾತಕಾರಿಯಾಗಿದೆ ಎಂದು ಹೇಳಿದ್ದಾರೆ. ಅಲ್ಪಸಂಖ್ಯಾತರ ಮತ ಕಳೆದುಕೊಳ್ಳುವ ಭಯದಿಂದ ತನಿಖೆಯಲ್ಲಿ ವಿಳಂಬ ಮಾಡುವಂತೆ ಪೊಲೀಸರ ಮೇಲೆ ಒತ್ತಡ ಹೇರುತ್ತಿರುವ ಕಾಂಗ್ರೆಸ್ಸಿಗರು ದೇಶದ್ರೋಹಿಗಳೋ ಅಲ್ಲವೋ ಎಂಬುದನ್ನು ಸ್ವಘೋಷಿತ ಬುದ್ಧಿಜೀವಿಗಳು ತಿಳಿಸಬೇಕು ಎಂದು ಅವರು ಟೀಕಿಸಿದ್ದಾರೆ.
ಈ ಬಗ್ಗೆ ರಾಜ್ಯಪಾಲರು ದಿಟ್ಟ ಕ್ರಮ ಕೈಗೊಂಡು ಉಗ್ರರ ವಿಚಾರಣೆಯನ್ನು ಸಿಬಿಐಗೆ ವಹಿಸಬೇಕು. ಇದರಿಂದ ರಾಜ್ಯ ಹಾಗೂ ದೇಶವನ್ನು ಕಾಂಗ್ರೆಸಿಗರಿಂದ ರಕ್ಷಿಸಲು ಸಾಧ್ಯ ಎಂದು ಅವರು ಮನವಿ ಮಾಡಿದರು.
ಕಾಂಗ್ರೆಸ್ ನಿರಾಕರಣೆ ಬಿಜೆಪಿ ಹೇಳಿಕೆಯನ್ನು ಕಾಂಗ್ರೆಸ್ ತಳ್ಳಿ ಹಾಕಿದ್ದು, ಇದು ಅರ್ಥಹೀನ ಆರೋಪ ಎಂದು ಹೇಳಿದೆ. ಕಾಂಗ್ರೆಸ್ ಎಂದೂ ರಾಷ್ಟ್ರ ರಕ್ಷಣೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಕಾಂಗ್ರೆಸ್ ಪ್ರತಿಕ್ರಿಯಿಸಿದೆ.
|