ಮಹಾರಾಷ್ಟ್ರ ನವನಿರ್ಮಾಣ ಸೇನಾದ ಮುಖಂಡ ರಾಜ್ ಠಾಕ್ರೆ ಉತ್ತರ ಭಾರತೀಯರ ವಿರುದ್ಧ ಮಹಾರಾಷ್ಟ್ರದಲ್ಲಿ ಹಮ್ಮಿಕೊಂಡಿರುವ ಚಳುವಳಿಗೆ ತನ್ನ ಸಾತ್ವಿಕ ಬೆಂಬಲವಿದೆ ಎಂದು ಹೇಳಿರುವ ಬಂಡಾಯ ಸಾಹಿತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪಾಟೀಲ್, ಅವರ ಮಣ್ಣಿನ ಮಕ್ಕಳ ಹಕ್ಕಿನ ಕಾಳಜಿ ಒಪ್ಪತಕ್ಕದ್ದು ಎಂದಿದ್ದಾರೆ.
ಬೆಂಗಳೂರು ಪ್ರೆಸ್‌ಕ್ಲಬ್ ಹಾಗೂ ಬೆಂಗಳೂರು ವರದಿಗಾರರ ಕೂಟವು ಜಂಟಿಯಾಗಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಠಾಕ್ರೆಯ ಹೋರಾಟದ ಸ್ವರೂಪ ಒಪ್ಪುವುದಕ್ಕೆ ಕಷ್ಟವಾದರೂ ಅದರ ಹಿಂದಿರುವ ಮಣ್ಣಿನ ಮಕ್ಕಳ ಹಕ್ಕನ್ನು ಪ್ರತಿಪಾದಿಸುವ ಸಿದ್ಧಾಂತವನ್ನು ಒಪ್ಪಬೇಕಾಗುತ್ತದೆ ಎಂದರು.
ಕಳೆದ 50 ವರ್ಷಗಳಿಂದ ನಮ್ಮ ರಾಜ್ಯವನ್ನಾಳಿರುವ ಯಾವ ಪಕ್ಷದಿಂದಲೂ ಕನ್ನಡಿಗರಿಗೆ ನ್ಯಾಯ ಸಿಕ್ಕಿಲ್ಲ. ಯಾವುದೇ ರಾಜ್ಯದಲ್ಲಿ ಆ ರಾಜ್ಯದ ಮಣ್ಣಿನ ಮಕ್ಕಳಿಗೆ ಮೊದಲ ಆದ್ಯತೆ ದೊರೆಯಬೇಕು. ಹೊರ ರಾಜ್ಯದಿಂದ ಬಂದವರು ಇಲ್ಲಿಗೆ ಬಂದ ಮೇಲೆ ಕನ್ನಡಿಗರಂತೆಯೇ ಬದುಕುವುದನ್ನು ಬಿಟ್ಟು ಅವರ ರೀತಿ-ರಿವಾಜುಗಳನ್ನು ನಮ್ಮ ಮೇಲೆ ಹೇರಲು ಹೊರಟರೆ ಅದನ್ನು ಸಹಿಸಲು ಸಾಧ್ಯವಿಲ್ಲ ಎಂದು ಚಂಪಾ ಅಬ್ಬರಿಸಿದರು.
ರಾಜ್ಯದಲ್ಲಿಯೂ ಹಕ್ಕು ಪ್ರತಿಪಾದನೆಯ ಹೋರಾಟ ನಡೆಸುವುದು ಈಗ ಹಿಂದೆಂದಿಗಿಂತಲೂ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಮಾನ ಮನಸ್ಕರ ಜೊತೆ ಚರ್ಚಿಸಿ ಹೋರಾಟದ ಸ್ವರೂಪವನ್ನು ನಿರ್ಧರಿಸುವುದಾಗಿ ಚಂಪಾ ತಿಳಿಸಿದರು.
|