ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಸಮೀಪದ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ರಸ್ತೆಯ ಬದಿಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಮೃತಪಟ್ಟವರನ್ನು ತಮಿಳುನಾಡಿನ ಮಣಿ, ಪಳನಿಸ್ವಾಮಿ ಹಾಗೂ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದ ಮಲ್ಲಿಕಾರ್ಜುನ ಬಡಿಗೇರಿ ಎಂದು ಗುರುತಿಸಲಾಗಿದೆ. ಅಪಘಾತಕ್ಕೆ ಬಸ್ ಚಾಲಕನ ಬೇಜವಾಬ್ದಾರಿತನವೇ ಕಾರಣ ಎಂದು ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗುತ್ತಿದ್ದ ಬಸ್ಸಿನ ಈ ನಾಲ್ವರು ಪ್ರಯಾಣಿಕರು ಮೃತಪಟ್ಟಿದ್ದರೆ, ಗಾಯಗೊಂಡಿರುವ 8 ಮಂದಿಯ ಪೈಕಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. ಈ ಘಟನೆಯ ನಂತರ ಚಾಲಕ ತಲೆಮರೆಸಿಕೊಂಡಿದ್ದಾನೆ.
ಗಾಯಾಳುಗಳನ್ನು ಚಿತ್ರದುರ್ಗದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಭರಮಸಾಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
|