ಕದ್ದ ಕಾರುಗಳನ್ನು ನಕಲಿ ದಾಖಲೆ ಸೃಷ್ಟಿಸಿ ಕಡಿಮೆ ಬೆಲೆಗೆ ಮಾರಟ ಮಾಡುತ್ತಿದ್ದ ಮೂರು ಮಂದಿ ಖದೀಮರನ್ನು ನಗರದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ವರದಾರೆಡ್ಡಿ, ಉತ್ತರ ಪ್ರದೇಶದ ಮಹಮದ್ ಯೂಸುಫ್ ಹಾಗೂ ರಾಮಬಹದ್ದೂರ್ ಸಿಬಿಐ ಬಲೆಗೆ ಬಿದ್ದಿದ್ದು, ಇವರಿಂದ ಸುಮಾರು 35 ಲಕ್ಷ ರೂ.ಮೌಲ್ಯದ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಾರಕಾಸ್ತ್ರಗಳನ್ನಿಟ್ಟುಕೊಂಡು ನಗರದ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇವರು ದರೋಡೆಗೆ ಸಂಚು ಹೂಡಿದ್ದಾಗ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದರೂ ಸಹ ಉಳಿದ ನಾಲ್ವರು ತಪ್ಪಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಬಂಧಿತರು ನೀಡಿರುವ ಸುಳಿವಿನ ಅನುಸಾರ ಈಗಾಗಲೇ 3 ಕ್ವಾಲೀಸ್ ಹಾಗೂ 3 ಟವೇರಾ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರು ಸೇರಿದಂತೆ ಮುಂಬೈ, ಕೇರಳದ ವಿವಿಧ ಭಾಗಗಳಲ್ಲಿ ಇವರು ಕಾರುಗಳ್ಳತನ ನಡೆಸಿದ್ದಾರೆಂದು ಪ್ರಥಮ ಹಂತದ ವಿಚಾರಣೆಯಿಂದ ತಿಳಿದುಬಂದಿದೆ.
|