ರಾಜ್ಯದ ಮುಖ್ಯ ಚುನಾವಣಾಧಿಕಾರಿ ರಾಮಶೇಷನ್ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ. ಅವರ ರಾಜೀನಾಮೆಯನ್ನು ರಾಜ್ಯಪಾಲ ರಾಮೇಶ್ವರ ಠಾಕೂರ್ ಸ್ವೀಕರಿಸಿದ್ದು, ಮಂಗಳವಾರ ಅಧಿಕೃತವಾದ ಆದೇಶ ಹೊರಬೀಳುವ ಸಾಧ್ಯತೆಗಳಿವೆ.
ಹಿರಿಯ ಐಎಎಸ್ ಅಧಿಕಾರಿಯಾಗಿರುವ ರಾಮಶೇಷನ್ ಸ್ವಯಂ ನಿವೃತ್ತಿ ಘೋಷಿಸಿದ್ದು, ಸೋಮವಾರವೇ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ವಿಧಾನಸಭಾ ಚುನಾವಣೆ ನಡೆಯಬೇಕಿರುವ ಸಂದರ್ಭದಲ್ಲಿ ಚುನಾವಣಾಧಿಕಾರಿಗಳ ಈ ನಿರ್ಧಾರದಿಂದ ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಆದರೆ ಮೂಲಗಳ ಪ್ರಕಾರ ರಾಮಶೇಷನ್ ನಿವೃತ್ತಿಗೆ ಯಾವುದೇ ಕಾರಣಗಳಿಲ್ಲ. ಸುಮಾರು 18ಲಕ್ಷರೂ.ಗಳಷ್ಟು ಮಾಸಿಕ ಆದಾಯ ಇರುವ ಖಾಸಗಿ ಕ್ಷೇತ್ರವೊಂದರಲ್ಲಿ ಹುದ್ದೆ ದೊರಕಿದ್ದರಿಂದ ರಾಜಿನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಈ ಮಧ್ಯೆ ರಾಮಶೇಷನ್ ಸ್ಥಾನಕ್ಕೆ ಇನ್ನೂ ಕೂಡ ಯಾರನ್ನು ನೇಮಿಸಿಲ್ಲವಾದರೂ ಒಂದೆರಡು ದಿನಗಳಲ್ಲಿ ಈ ಹುದ್ದೆಯನ್ನು ತುಂಬಲಾಗುವುದು ಎಂದು ರಾಜಭವನದ ಮೂಲಗಳು ತಿಳಿಸಿವೆ.
ಚುನಾವಣಾಧಿಕಾರಿ ರಾಮಶೇಷನ್ ರಾಜ್ಯದ ಮತದಾರರ ಕರಡು ಪ್ರತಿಯನ್ನು ಸಿದ್ಧಗೊಳಿಸಿದ ಬಳಿಕವಷ್ಟೆ ಈ ನಿರ್ಧಾರವನ್ನು ಕೈಗೊಂಡಿದ್ದಾರೆ. ತಮ್ಮ ಅಧಿಕಾರದ ಸಂದರ್ಭದಲ್ಲಿ ಚುನಾವಣೆಗೆ ಸಂಬಂಧಪಟ್ಟಂತೆ ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ಅವುಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕೂಡ ಒಳಗೊಂಡಿದೆ.
|